ಜಿಲ್ಲೆ

ಬಾಲ್ಯ ವಿವಾಹಮುಕ್ತ ಬೀದರ್ ಗೆ ಕೈಜೋಡಿಸಿ

ರೇವಣಸಿದ್ದಪ್ಪ ಪಾಟೀಲ್

ಭಾಲ್ಕಿ: ಬಾಲ್ಯ ವಿವಾಹಮುಕ್ತ ಬೀದರ್ ಜಿಲ್ಲೆಯಾಗಿ ಮಾಡುವ ಸಂಕಲ್ಪಕ್ಕೆ ವಿದ್ಯಾರ್ಥಿಗಳು, ಸಾರ್ವಜನಿಕರು ಕೈಜೋಡಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಕರೆ ನೀಡಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ತಳವಾಡ(ಕೆ) ಗ್ರಾಮ ಪಂಚಾಯಿತಿ ಮತ್ತು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಸಹಯೋಗದಡಿ ಆಯೋಜಿಸಿದ್ದ ಬಾಲ್ಯ ವಿವಾಹಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದು ಶತಮಾನೋತ್ಸವ ಹೊಸ್ತಿಲ್ಲಲ್ಲಿದ್ದೇವೆ. ಆದರೆ ಇಂದಿಗೂ ಬಾಲ್ಯವಿವಾಹ ಜೀವಂತಿಕೆ ಇರುವುದು ಕಳವಳಕಾರಿ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶೈಕ್ಷಣಿಕ ಮತ್ತು ತಂತ್ರಜ್ಞಾನದಲ್ಲಿ ಅಭಿವೃದ್ಧಿ ಸಾಧಿಸುತ್ತಿರುವ ರಾಜ್ಯದಲ್ಲಿ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ 45 ಸಾವಿರಕ್ಕೂ ಅಧಿಕ ಬಾಲಕಿಯರು ಬಾಲ್ಯ ವಿವಾಹಕ್ಕೆ ಗುರಿಯಾಗಿ ಗರ್ಭ ಧರಿಸಿರುವುದು ಆತಂಕದ ವಿಷಯ. ಇಂಥ ಸಾಮಾಜಿಕ ಪಿಡುಗು ತಡೆಯುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ಬಾಲ್ಯ ವಿವಾಹ ತಡೆಗಟ್ಟುವಿಕೆಯಲ್ಲಿ ವಿದ್ಯಾಥರ್ಿಗಳ ಪಾತ್ರವೂ ದೊಡ್ಡದಿದೆ. ತಮ್ಮ ಬಡಾವಣೆ, ಊರುಗಳಲ್ಲಿ ಬಾಲ್ಯ ವಿವಾಹ ಕಂಡು ಬಂದಲ್ಲಿ ವಿದ್ಯಾರ್ಥಿಗಳು ವಿರೋಧಿಸಿ ಸಂಬಂಧಿತರಿಗೆ ಗುಪ್ತ ಮಾಹಿತಿ ನೀಡಿ ಬಾಲ್ಯ ವಿವಾಹಮುಕ್ತ ಜಿಲ್ಲೆಯನ್ನಾಗಿಸುವ ನಮ್ಮ ಸಂಕಲ್ಪಕ್ಕೆ ಸಾಥ್ ನೀಡಬೇಕು ಎಂದು ಕೋರಿದರು.
ರಾಜ್ಯದ ವಿವಿಧೆಡೆ ವಿವಿಧ ಕಾರಣಗಳಿಂದ ನಡೆಯುತ್ತಿರುವ ಬಾಲ್ಯ ವಿವಾಹ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಇದನ್ನು ನಿಲ್ಲಿಸುವ ಕೆಲಸ ಎಲ್ಲರೂ ಸೇರಿ ಮಾಡಬೇಕಾಗಿದೆ. ಗ್ರಾಮದಿಂದ ಜಿಲ್ಲಾ ಮಟ್ಟದವರೆಗೂ ಬಾಲ್ಯ ವಿವಾಹ ನಡೆಯದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ನಿರ್ಲಕ್ಷ್ಯ ಮಾಡಿದರೆ ಆಯೋಗವೇ ಕ್ರಮ ಜರುಗಿಸಲಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಬಾಲ್ಯ ವಿವಾಹ ಸಮಾಜದ ಬಹುದೊಡ್ಡ ಪಿಡುಗು. ಇದನ್ನು ತಡೆಗಟ್ಟುವ ಹೊಣೆಗಾರಿಕೆ ಎಲ್ಲರ ಮೇಲಿದೆ. 12ನೇ ಶತಮಾನದಲ್ಲೇ ವಿಶ್ವಗುರು ಬಸವಣ್ಣನವರು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಆದ್ಯತೆ ನೀಡಿದ್ದರು. ಹೀಗಾಗಿ ಇಂದು ಮಹಿಳೆಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಧೈರ್ಯದಿಂದ ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ ಎಂದರು.
ಮಕ್ಕಳ ಕ್ಷೇತ್ರದಲ್ಲಿ ದಶಕದಿಂದ ಶಶಿಧರ ಕೋಸಂಬೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಆಯೋಗ ಸದಸ್ಯರಾಗಿ ರಾಜ್ಯಾದ್ಯಂತ ಸಂಚರಿಸಿ ಮಕ್ಕಳ ರಕ್ಷಣೆಗೆ ಕಾಳಜಿ ವಹಿಸುತ್ತಿರುವುದು ಮಾದರಿ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಅನುಪಮಾ ರಾಚಣ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗುರುರಾಜ, ಪ್ರಾಚಾರ್ಯ ಬಸವರಾಜ ಮೊಳಕೀರೆ ಮಾತನಾಡಿದರು. ತಾಪಂ ಇಒ ಸೂರ್ಯಕಾಂತ ಬಿರಾದಾರ್, ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ, ಪಿಡಿಒ ಪ್ರಿಯದರ್ಶಿನಿ, ರವಿ ರಾಚಣ್ಣ, ಬಸವರಾಜ ಪ್ರಭಾ ಇದ್ದರು.
ಚೇತನಕುಮಾರ ರಾಜಕುಮಾರ ಅಲಶೆಟ್ಟೆ ವಚನಗಾಯನ ನಡೆಸಿಕೊಟ್ಟರು. ದೈಹಿಕ ನಿರ್ದೇಶಕ ಅನೀಲಕುಮಾರ ಪಾಟೀಲ್ ಪ್ರತಿಜ್ಞಾವಿಧಿ ಬೋಧಿಸಿದರು. ಆಡಳಿತಾಧಿಕಾರಿ ಮೋಹನರಡ್ಡಿ ಸ್ವಾಗತಿಸಿದರು. ಮಧುಕರ ಗಾಂವಕರ್ ನಿರೂಪಣೆ ಮಾಡಿದರು. ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ವಂದಿಸಿದರು.