ಔರಾದ: ಶಾಸಕ ಪ್ರಭು ಚವ್ಹಾಣ ಅವರು ಅ.13ರಂದು ಪಟ್ಟಣದ ಭೂದಾಖಲೆಗಳ ಸಹಾಯಕ ನಿರ್ದೇಶಕರು(ಎಡಿಎಲ್‌ಆರ್) ಹಾಗೂ ಉಪ ನೋಂದಣಾಧಿಕಾರಿ ಕಛೇರಿಗೆ ದಿಢೀರ್ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.
ಎಡಿಎಲ್‌ಆರ್ ಕಛೇರಿಗೆ ಭೇಟಿ ನೀಡಿದ ವೇಳೆ ಬೆಳಗ್ಗೆ 11 ಗಂಟೆಯಾದರೂ ಅಧಿಕಾರಿ ಕಛೇರಿಗೆ ಬಾರದೇ ಇರುವುದಕ್ಕೆ ಕೆಂಡಾಮAಡಲರಾದರು. ತಡವಾಗಿ ಆಗಮಿಸಿದ ಎಡಿಎಲ್‌ಆರ್‌ಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಅಧಿಕಾರಿಯೇ ಸಮಯ ಪಾಲಿಸದಿದ್ದರೆ ಉಳಿದ ಸಿಬ್ಬಂದಿ ಹೇಗೆ ಕೆಲಸ ಮಾಡುತ್ತಾರೆ. ಎಡಿಎಲ್‌ಆರ್ ಕಛೇರಿಯಲ್ಲಿ ಯಾವುದೇ ಕೆಲಸಗಳಾಗುತಿಲ್ಲವೆಂದು ದೂರುಗಳು ಬರುತ್ತಿವೆ. ಅರ್ಜಿ ಸಲ್ಲಿಸಿ ಒಂದುವರೆ ವರ್ಷವಾದರೂ ಕೆಲಸವಾಗುತ್ತಿಲ್ಲವೆಂದು ರೈತರು ನನ್ನ ಬಳಿಗೆ ಬರುತ್ತಿದ್ದಾರೆ. ಇದೇ ಮುಂದುವರೆದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಅಧಿಕಾರಿಯ ಟೇಬಲ್ ಮೇಲೆ ಪೇರಿಸಿಟ್ಟಿದ್ದ ಕೆಲಸ ಬಾಕಿ ಉಳಿದ ಕಡತಗಳನ್ನು ನೋಡಿ ದಂಗಾದ ಶಾಸಕರು, ಕೆಲಸಗಳನ್ನು ಏಕೆ ಬಾಕಿ ಉಳಿಸಿಕೊಂಡಿದ್ದೀರಿ ? ಸರ್ವೇಯರ್‌ಗಳ ಕುರಿತು ದೂರುಗಳ ಮಹಾಪುರವೇ ಹರಿದುಬರುತ್ತಿದೆ. ಹಣ ಖರ್ಚು ಮಾಡದೇ ಕೆಲಸ ಮಾಡುವುದಿಲ್ಲವೆಂದು ರೈತರು ದೂರುತ್ತಿದಾರೆ. ಇದಕ್ಕೆಲ್ಲ ಔರಾದ್‌ನಲ್ಲಿ ಆಸ್ಪದ ಕೊಡಬಾರದು ಎಂದು ತಹಸೀಲ್ದಾರರಿಗೆ ತಿಳಿಸಿದರು.
ಎಡಿಎಲ್‌ಆರ್ ಕುರಿತು ನಿರಂತರ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ನಾನು ಖುದ್ದಾಗಿ ಬೇಟಿ ನೀಡಿದ್ದೇನೆ. ಅಧಿಕಾರಿ ಮತ್ತು ಸಿಬ್ಬಂದಿ ಸಮಯಕ್ಕೆ ಕಚೇರಿಗೆ ಬರುವುದಿಲ್ಲವೆಂದು ಗೊತ್ತಾಗಿದೆ. ಸಾಕಷ್ಟು ಕೆಲಸಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಇವರನ್ನು ಬೇರೆಡೆಗೆ ಕಳುಹಿಸಲು ಶಿಫಾರಸ್ಸು ಮಾಡಿ ಎಂದು ತಹಸೀಲ್ದಾರರಿಗೆ ನಿರ್ದೇಶನ ನೀಡಿದರು. ಸಿಬ್ಬಂದಿಯ ಹಾಜರಾತಿಯನ್ನು ವೀಕ್ಷಿಸಿ ಗೈರು ಹಾಜರಾದವರ ಸಂಬಳವನ್ನು ಕಡಿತಗೊಳಿಸಬೇಕು ಮತ್ತು ದೀರ್ಘಾವಧಿ ರಜೆಯಲ್ಲಿರುವವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸೂಚಿಸಿದರು.
ಎಡಿಎಲ್‌ಆರ್ ಕಛೇರಿಯಲ್ಲಿ ದಲ್ಲಾಳಿಗಳ ಕಿರುಕುಳ ಹೆಚ್ಚಾಗಿದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಇವರ ಸಹಾಯವಿಲ್ಲದೇ ಯಾವುದೇ ಕೆಲಸಗಳಾಗುವುದಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಕಡಿವಾಣ ಬೀಳಬೇಕು. ಕಾರ್ಯಾಲಯದಲ್ಲಿ ದಲ್ಲಾಳಿಗಳಿಗೆ ಆಸ್ಪದ ಕೊಡಬಾರದು. ತಾಲ್ಲೂಕಿನ ಮುಖ್ಯಸ್ಥರಾಗಿರುವ ತಹಸೀಲ್ದಾರರು ಇಂಥವುಗಳಿಗೆ ಕೂಡಲೇ ಕಡಿವಾಣ ಹಾಕಬೇಕು. ಸಾರ್ವಜನಿಕರನ್ನು ವಿನಾಕಾರಣ ಕಛೇರಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕು. ಜನತೆಗೆ ಸಮಸ್ಯೆಯಾದರೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಉಪ ನೊಂದಣಾಧಿಕಾರಿಯ ವಿರುದ್ಧ ಗರಂ: ಔರಾದ(ಬಿ) ತಾಲ್ಲೂಕಿನ ಉಪ ನೋಂದಣಾಧಿಕಾರಿಯ ಕಛೇರಿಗೆ ಭೇಟಿ ನೀಡಿದ ಶಾಸಕರು ಅಲ್ಲಿನ ಕಾರ್ಯವೈಖರಿಯ ಬಗ್ಗೆ ಪರಿಶೀಲಿಸಿದರು. ನೋಂದಣಿಗೆ ಪ್ರತಿದಿನ ಎಷ್ಟು ಅರ್ಜಿಗಳು ಬರುತ್ತವೆ ? ಎಷ್ಟು ಅರ್ಜಿಗಳನ್ನು ವಿಲೇವಾರಿ ಮಾಡುತ್ತೀರಿ ಎನ್ನುವ ಬಗ್ಗೆ ಮಾಹಿತಿ ಪಡೆದರು.
ಉಪ ನೋಂದಣಾಧಿಕಾರಿ ಕಛೇರಿಯಲ್ಲಿ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಸಾರ್ವಜನಿಕರೊಬ್ಬರು ಶಾಸಕರ ಗಮನಕ್ಕೆ ತಂದಾಗ ಅಧಿಕಾರಿಯ ಮೇಲೆ ಸಿಟ್ಟಾದರು.
ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸಬೇಕು. ಜನತೆಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು. ಇಲಾಖೆಯ ಕುರಿತು ಯಾವುದೇ ರೀತಿಯ ದೂರುಗಳು ಬಾರದ ರೀತಿಯಲ್ಲಿ ಕೆಲಸ ಮಾಡಬೇಕೆಂದು ಸೂಚಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಲಶೆಟ್ಟಿ ಚಿದ್ರೆ ಹಾಗೂ ಇತರರು ಉಪಸ್ಥಿತರಿದ್ದರು.