ಬೀದರ್: ವೀರ ವಿರಾಗಿಣಿ, ವೈರಾಗ್ಯ ನಿಧಿ ಅಕ್ಕಮಹಾದೇವಿ ಹಾಗೂ 12ನೇ ಶತಮಾನದ ಎಲ್ಲ ಶರಣೆಯರ ನಿರ್ಮಲ ಬದುಕು, ತೋರಿದ ತ್ಯಾಗಮಯ ಜೀವನ ಸರ್ವಕಾಲಕ್ಕೂ ಮಾದರಿಯಾಗಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಡಿ ನಗರದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಮತ್ತು ಮಹಿಳಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ತನ್ನತನವನ್ನು ಅರಿಯಲು ಕಲ್ಯಾಣದತ್ತ ಸಾಗಿದ ಅಕ್ಕಮಹಾದೇವಿ ನಡೆದ ದಾರಿ ಮತ್ತು ನುಡಿದ ವಾಕ್ಯಗಳೆಲ್ಲ ಅನುಭವಪೂರಿತ ವಚನಗಳಾದವು ಎಂದರು.
ಬಸವಾದಿ ಶರಣರು ಅನುಭವ ಮಂಟಪ ಮೂಲಕ ಸ್ತ್ರೀ ಸಮುದಾಯಕ್ಕೆ ಸಮಾನತೆ ಪರಿಕಲ್ಪನೆ ನೀಡಿ ಶರಣ ಪರಂಪರೆಗೆ ಒತ್ತು ನೀಡಿದವರು. ಶರಣ-ಶರಣೆಯರು ಧರ್ಮಪಥದ ಮೂಲಕ ಸಾಗಿ ನಿಜ ಬದುಕಿನ ಅರಿವು ಅರಿತು ನಮಗೆ ವಚನ ಸಾಹಿತ್ಯವನ್ನು ನೀಡಿದ್ದಾರೆ ಎಂದು ಹೇಳಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಮೊಬೈಲ್ ಸಂಸ್ಕೃತಿ ಭರಾಟೆ ನಡುವೆ ನಿಜಜೀವನದ ಪ್ರಜ್ಞೆ ಕಡಿಮೆಯಾಗುತ್ತಿದೆ. 12ನೇ ಶತಮಾನದಲ್ಲಿ ಯಾವುದೇ ಸೌಲಭ್ಯವಿರದ ಸಂದರ್ಭದಲ್ಲಿ ಅಕ್ಕಮಹಾದೇವಿ ಅವರು ಸಾವಿರಾರು ವಚನ ಬರೆದು ಪ್ರಥಮ ಕವಯತ್ರಿಯಾಗಿದ್ದಾರೆ ಎಂದು ಬಣ್ಣಿಸಿದರು.
ಸಾಹಿತಿಗಳು ಪ್ರಸ್ತುತ ವಿದ್ಯಮಾನಗಳ ಬಗ್ಗೆ ನಿಗಾ ವಹಿಸಬೇಕು. ಹೊಗುಳುವುದು, ತೆಗಳುವುದನ್ನು ಬಿಟ್ಟು ಸಮಾಜದ ಪರಿವರ್ತನೆಗೆ ಕವಿ ಹೃದಯ ಮಿಡಿಯಬೇಕು. ಕವಿಗಳಲ್ಲಿ ಅಗಾಧ ಶಕ್ತಿ ಅಡಗಿದೆ. ಹರಿತವಾದ ಲೇಖನ ಎಂಥವರನ್ನೂ ಬಡಿದೆಬ್ಬಿಸಬಹುದು ಎಂದರು.
ರಾಜ್ಯ ವಿಜ್ಞಾನ ಸಂಶೋಧಕ ಪರಿಷತ್ ಜಿಲ್ಲಾಧ್ಯಕ್ಷ ದೇವಿಪ್ರಸಾದ ಕಲಾಲ್ ಉಪನ್ಯಾಸ ನೀಡಿದರು. ಪ್ರಥಮ ದರ್ಜೆ ಮಹಾವಿದ್ಯಾಲಯ ಪ್ರಾಧ್ಯಾಪಕಿ ಡಾ.ಮಹೇಶ್ವರಿ ಹೇಡೆ, ಕರ್ನಾಟಕ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಈಶ್ವರಮ್ಮ ಪಾಟೀಲ್, ಉಮಾ ಬಾಪುರೆ, ಮಲ್ಲಮ್ಮ ಪಾಟೀಲ್, ಕೀರ್ತಿ ಲತಾ ಹೊಸಳ್ಳೆ, ವಜ್ರಾ ಪಾಟೀಲ್, ಕುಸುಮಾ ಹಕ್ಯಾಳ, ಚನ್ನಮ್ಮ ವಲ್ಲೇಪುರ, ಗೀತಾ ಪಾಟೀಲ್, ಡಾ.ಶ್ರೇಯಾ ಮಹೇಂದ್ರಕರ್, ಡಾ.ಸುಜಾತಾ ಹೊಸಮನಿ, ಡಾ.ಜಗದೇವಿ ತಿಬಶೆಟ್ಟಿ, ಜಗದೇವಿ ದುಬಲಗುಂಡೆ, ಬುದ್ಧದೇವಿ ಅಶೋಕ, ಭೂಮಿಕಾ ಕಟ್ಟೆ, ಮಲ್ಲೇಶ್ವರಿ ಉದಯಗಿರೆ, ಮಹಾನಂದಾ ಪಾಟೀಲ್, ರಾಜಮ್ಮ ಚಿಕ್ಕಪೇಟೆ, ರೇಖಾ ಎನ್.ರಾಕೇಶ್, ರೇಣುಕಾ ಎನ್.ಬಿ. ಇತರರು ಸ್ವರಚಿತ ಕವನ ವಾಚಿಸಿದರು.
ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಭಾರತಿ ವಸ್ತ್ರದ್, ಸಾಹಿತಿ ರಜಿಯಾ ಬಳಬಟ್ಟಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಕಾರ್ಯದರ್ಶಿ ಶಿವಕುಮಾರ ಕಟ್ಟೆ, ಟಿ.ಎಂ. ಮಚ್ಚೆ, ವಿದ್ಯಾವತಿ ಬಲ್ಲೂರ ಇತರರಿದ್ದರು. ಬಿ.ಜೆ. ಪಾರ್ವತಿ ಸೋನಾರೆ ಸ್ವಾಗತಿಸಿದರು. ಜಯದೇವಿ ಯದಲಾಪುರೆ ನಿರೂಪಣೆ ಮಾಡಿದರು. ಪ್ರತಿಭಾ ಚಾಮಾ ವಂದಿಸಿದರು.