ಬೀದರ್: ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸಿದರೂ ಎರಡು ಲಕ್ಷ ಮತಗಳ ಅಂತರದಿಂದ ಸೋಲಿಸುವೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದು, ಅಧಿಕಾರದ ಮದ ಯಾವ ರೀತಿ ತಲೆಗೇರಿದೆ ಎಂಬುದನ್ನು ತೋರಿಸುತ್ತದೆ ಎಂದು ಎಐಸಿಸಿ ಸದಸ್ಯ ಆನಂದ ದೇವಪ್ಪ ಹೇಳಿದ್ದಾರೆ.
ರಾಹುಲ್ ಗಾಂಧಿ ರಾಷ್ಟೀಯ ನಾಯಕ. ದೇಶದ ದಲಿತರು, ಬಡವರ ಸೇವೆಯನ್ನು ಸುಮಾರು ವರ್ಷಗಳಿಂದ ಮಾಡುತ್ತ ಬರುತ್ತಿದ್ದಾರೆ. ಅಂಥ ರಾಷ್ಟ್ರ ನಾಯಕರ ಬಗ್ಗೆ ಮಾತನಾಡುವಷ್ಟು ಎತ್ತರಕ್ಕೆ ಖೂಬಾ ಬೆಳೆದಿಲ್ಲ ಎಂದು ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
ಜಿಲ್ಲೆಯ ಮತದಾರರ ಆಶೀರ್ವಾದ ಹಾಗೂ ಪ್ರಧಾನಿ ನರೇಂದ್ರ ಮೋದಿ ಗಾಳಿಯಲ್ಲಿ ಎರಡು ಬಾರಿ ಗೆದ್ದಿದ್ದೀರಿ ಎಂಬುದನ್ನು ಮರೆಯಬೇಡಿ. 2024ರ ಲೋಕಸಭೆ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿರುವೆ. ಸ್ಪರ್ಧೆ ಮಾಡಿದರೆ ನಿಮ್ಮ ಸೋಲು ಖಚಿತ. ಇನ್ನೊಮ್ಮೆ ನಮ್ಮ ನಾಯಕರ ಬಗ್ಗೆ ಮಾತನಾಡಬೇಕಾದರೆ ವಿಚಾರ ಮಾಡಿ ಎಂದು ಸಲಹೆ ನೀಡಿದ್ದಾರೆ.