ಜಿಲ್ಲೆ

ಬೀದರ್ ಜಿಲ್ಲೆ ಹಸಿರುಮಯ ಮಾಡೋಣ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರ ಒದಗಿಸಲು ಎಲ್ಲರೂ ಸೇರಿ ಬೀದರ್ ಜಿಲ್ಲೆಯನ್ನು ಹಸಿರುಮಯವಾಗಿ ಮಾಡೋಣ ಎಂದು ಅರಣ್ಯ, ಜೈವಿಕ, ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ವನ್ಯಜೀವಿ ಸಂರಕ್ಷಣೆಯಲ್ಲಿ ಪಾಲುಗಾರಿಕೆ ಹಾಗೂ ವನ್ಯಜೀವಿಗಳ ಸಂರಕ್ಷಣೆಗಾಗಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ 69ನೇ ವನ್ಯಜೀವಿ ಸಪ್ತಾಹ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಜನರಲ್ಲಿ ಪರಿಸರ, ಪ್ರಕೃತಿ, ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶ ಎಂದರು.
ಭೂಮಿಯಲ್ಲಿರುವ ಎಲ್ಲ ಜೀವಿಗಳಿಗೆ ನಮ್ಮಂತೆ ಬದುಕುವ ಹಕ್ಕಿದೆ. ಪರಿಸರ, ಪ್ರಕೃತಿ ಸಮನ್ವಯದಲ್ಲಿ ವನ್ಯಜೀವಿಗಳ ಪಾತ್ರ ಬಹಳ ಮುಖ್ಯವಾಗಿದೆ. ಅರಣ್ಯ ನಾಶವಾದರೆ ಜಾಗತಿಕ ತಾಪಮಾನ ಹೆಚ್ಚಾಗುವುದಲ್ಲದೆ ಮನುಷ್ಯ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಶೇ.21 ಮಾತ್ರ ಅರಣ್ಯ ಪ್ರದೇಶವಿದೆ. ಭೌಗೋಳಿಕ ಪ್ರದೇಶದ ಪ್ರಕಾರ ಶೇ.33 ಅರಣ್ಯ ಇರಬೇಕು. ಬೀದರ್ ಜಿಲ್ಲೆಯಲ್ಲಿ ಶೇ.7 ಅರಣ್ಯ ಇದೆ. ಹೀಗಾಗಿ ಎಲ್ಲರೂ ಸಸಿಗಳನ್ನು ನೆಟ್ಟು ಬೆಳೆಸಬೇಕು. ಜೀವ ವೈವಿಧ್ಯ ಕಾಪಾಡಿದರೆ ಪರಿಸರ, ಪ್ರಕೃತಿ ಉಳಿಯುತ್ತದೆ. ವನ್ಯಜೀವಿಗಳ ಸಂರಕ್ಷಣೆಗಾಗಿ ನಾವೆಲ್ಲರೂ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿ ಕೃಷ್ಣಮೃಗ ಸಂರಕ್ಷಣೆ ಮೀಸಲು ಪ್ರದೇಶ ನಾನು ಮಂತ್ರಿಯಾದ ಬಳಿಕ ಘೋಷಣೆ ಮಾಡಿ 2 ಕೋಟಿ ಅನುದಾನ ನೀಡಿರುವೆ. ರಾಜ್ಯದಲ್ಲಿ ಈ ವರ್ಷ 5 ಕೋಟಿ ಹಾಗೂ ಜಿಲ್ಲೆಯಲ್ಲಿ 15 ಲಕ್ಷ ಸಸಿಗಳನ್ನು ನೆಡಲಾಗುತ್ತಿದ್ದು, ಈಗಾಗಲೇ ಜಿಲ್ಲೆಯಲ್ಲಿ 14.80 ಲಕ್ಷ ಸಸಿ ನೆಡಲಾಗಿದೆ ಎಂದು ಹೇಳಿದರು.
ಡಿಸಿ ಕಚೇರಿಯಿಂದ ಶುರುವಾದ ಜಾಥಾ ನೆಹರು ಕ್ರೀಡಾಂಗಣವರೆಗೆ ನಡೆಯಿತು. ಕ್ರೀಡಾಂಗಣದಲ್ಲಿ ಸಚಿವ ಖಂಡ್ರೆ ಅವರು ವನ್ಯಜೀವಿ ಸಂರಕ್ಷಣೆ ಕುರಿತು ಪ್ರಮಾಣವಚನ ಬೋಧಿಸಿದರು. ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ನಗರಸಭೆ ಅಧ್ಯಕ್ಷ ಎಂ.ಡಿ. ಗೌಸ್, ಡಿಸಿ ಗೋವಿಂದರಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ., ಎಸ್ಪಿ ಚನ್ನಬಸವಣ್ಣ ಲಂಗೋಟಿ, ಕಲಬುರಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪನ್ವಾರ್, ಅರಣ್ಯ ಉಪ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ. ಇತರರಿದ್ದರು.