ಬೀದರ್: ರಾಜ್ಯ ಸರ್ಕಾರ ವೀರಶೈವ-ಲಿಂಗಾಯತ ಅಧಿಕಾರಿಗಳಿಗೆ ಘೋರ ಅನ್ಯಾಯ ಮಾಡುತ್ತಿದೆ. ಪ್ರಮುಖ ಹುದ್ದೆಗಳಿಂದ ಸಮಾಜದ ಅಧಿಕಾರಿಗಳಿಗೆ ಕೊಕ್ ನೀಡಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡರೂ ಆದ ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸರ್ಕಾರ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ಆದರೆ ಈ ಬಗ್ಗೆ ಮಹಾಸಭೆ ಪ್ರಧಾನ ಕಾರ್ಯದರ್ಶಿ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಬಾಯಿಗೆ ಬೀಗ ಹಾಕಿಕೊಂಡು ಕುಳಿತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಕಿಡಿಕಾರಿದ್ದಾರೆ.
ಈಶ್ವರ ಖಂಡ್ರೆ ಒಳ್ಳೆಯ ಕೆಲಸಕ್ಕೆ ಮಾತನಾಡಲ್ಲ. ಭ್ರಷ್ಟಾಚಾರ, ಸ್ವಜನಪಕ್ಷಪಾತಕ್ಕೆ ಬಾಯಿ ತೆಗೆಯುತ್ತಾರೆ. ರಾಜ್ಯದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಕಾಂಗ್ರೆಸ್ ಸರ್ಕಾರ ಕಿರುಕುಳ ನೀಡುತ್ತಿರುವ ಬಗ್ಗೆ ಶಾಮನೂರು ಬಹಳ ಕಟುವಾದ ವಿಷಯ ಹೇಳಿದ್ದಾರೆ. ಆದರೆ ಅದೇ ಮಹಾಸಭೆ ಗುಮಾಸ್ತರಾಗಿರುವ ಖಂಡ್ರೆ ಈವರೆಗೆ ಚಕಾರ ಎತ್ತಿಲ್ಲ. ಸಮಾಜದ ಬಗ್ಗೆ ಸ್ವಲ್ಪವಾದರೂ ಕಾಳಜಿ, ಕಳಕಳಿ ಬೇಡವೆ ? ನಾಲ್ಕು ದಶಕಗಳಿಂದ ಖಂಡ್ರೆ ಪರಿವಾರ ಸ್ವಾರ್ಥ ಸಾಧನೆ, ಅಧಿಕಾರ ಸವಿಯಲು ಮಾತ್ರ ಸಮಾಜ ಬಳಸಿಕೊಳ್ಳುತ್ತಿದೆ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ದೂರಿದರು.
ಖಂಡ್ರೆಗೆ ಅಭಿವೃದ್ಧಿ ಗೊತ್ತಿಲ್ಲ. ಸುಳ್ಳು ಹೇಳುವುದು, ಒಳ್ಳೆಯ ರೀತಿ ಕೆಲಸ ಮಾಡುವವರ ಮೇಲೆ ಆರೋಪ ಮಾಡುವುದು ಗೊತ್ತಿದೆ. ನನ್ನ ವಿರುದ್ಧ ನಿರ್ಲಜ್ಜ, ಸುಳ್ಳುಗಾರ, ಅಭಿವೃದ್ಧಿ ಶೂನ್ಯ ಸೇರಿ ನಾನಾ ಕೆಟ್ಟ ಪದಗಳನ್ನು ಖಂಡ್ರೆ ಹಾಗೂ ಮಾಜಿ ಸಚಿವ ರಾಜಶೇಖರ ಪಾಟೀಲ್ ಬಳಸಿದ್ದಾರೆ. ಇದು ನಾಗರಿಕ ಸಮಾಜ ತಲೆತಗ್ಗಿಸುವಂಥ ನೀಚ ನುಡಿಗಳು. ಇಂಥ ಮಾತುಗಳು ಇವರ ಸಂಸ್ಕೃತಿ, ಸಂಸ್ಕಾರವನ್ನು ಸಮಾಜಕ್ಕೆ ಪ್ರದರ್ಶಿಸಿದೆ ಎಂದು ತಿರುಗೇಟು ನೀಡಿದರು.
ಅಧಿಕಾರವಿದ್ದಾಗ ಆಡಳಿತದ ದುರುಪಯೋಗ ಮಾಡಿಕೊಂಡು ಬಡವರು ಮತ್ತು ವಿರೋಧಿಗಳನ್ನು ಹತ್ತಿಕ್ಕುವ ಕೆಲಸ ಈಶ್ವರ ಖಂಡ್ರೆ ಮಾಡುತ್ತಲೇ ಬಂದಿದ್ದಾರೆ. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ)ಯಲ್ಲಿನ ಒಳ್ಳೆಯ ಯಂತ್ರಗಳನ್ನು ಎಂಜಿಎಸ್ಎಸ್ಕೆಗೆ ಹಾಕಿಕೊಂಡು ಪ್ರಾರಂಭಿಸಿದ್ದಾರೆ ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ. ನಾನು ಅಭಿವೃದ್ಧಿ ಮಾಡಿಲ್ಲ ಎನ್ನುತ್ತಿರುವ ಖಂಡ್ರೆ, ಬೀದರ್-ಭಾಲ್ಕಿ ಹೈವೇನಲ್ಲಿ 120 ಸ್ಪೀಡ್ ಕಾರ್ ನಲ್ಲಿ ಹೋಗುವ ರಸ್ತೆ ಯಾರು ಮಾಡಿಸಿದ್ದಾರೆ? ಬೀದರ್ ನಿಂದ ಬೆಂಗಳೂರಿಗೆ ಹೋಗುವ ವಿಮಾನ ಯಾರು ಆರಂಭಿಸಿದ್ದಾರೆ? ಸೈನಿಕ ಶಾಲೆ, ಸಿಪೆಟ್ ಕಾಲೇಜು ಯಾರ ಕೊಡುಗೆ? ನಿಮಗೆ ಆರೋಪ ಮಾಡುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ಟಾಂಗ್ ನೀಡಿದರು.
ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಉಮಾಕಾಂತ ನಾಗಮಾರಪಳ್ಳಿ ಪೆನಾಲ್ ಬಹುಮತ ಗಳಿಸಲಿದ್ದು, ಮತ್ತೆ ನಾಗಮಾರಪಳ್ಳಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತ. ಇದನ್ನು ತಡೆಯಲು ಖಂಡ್ರೆ, ಪಾಟೀಲ್ ಸೇರಿ ಯಾರಿಂದಲೂ ಸಾಧ್ಯವಿಲ್ಲ ಎಂದರು.
ಡಿಸಿಸಿ ಬ್ಯಾಂಕ್ ನಿಂದ ಎಂಜಿಎಸ್ಎಸ್ಕೆ ಪಡೆದ ಸಾಲ ಕುರಿತು ನಾನು ಕಳೆದ ವರ್ಷ ಕೇಳಿದರೆ ನನಗೆ ಮತ್ತು ನನ್ನ ತಮ್ಮನಿಗೆ ಯಾವುದೇ ಸಂಬಂಧವಿಲ್ಲ ಎಂದು ಖಂಡ್ರೆ ಹೇಳಿದ್ದರು. ಇದೀಗ ಸಹೋದರನಿಗೆ ಅಧ್ಯಕ್ಷ ಮಾಡಲು ಹೊರಟಿದ್ದು, ನಿರ್ಲಜ್ಜತನ ಯಾರದ್ದು ಎಂದು ತಿಳಿಸಲಿ ಎಂದು ಪ್ರಶ್ನಿಸಿದ ಖೂಬಾ, ಖಂಡ್ರೆ ಒತ್ತಡಕ್ಕೆ ಜಿಲ್ಲಾಡಳಿತ ಒಳಗಾಗದೆ ಪಾರದರ್ಶಕವಾಗಿ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.
ಈಶ್ವರ ಖಂಡ್ರೆ ತನ್ನ ಸಹೋದರನಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಾಡಲು, ರಾಜಶೇಖರ ಪಾಟೀಲ್ ತನ್ನ ಸಹೋದರನಿಗೆ ಉಪಾಧ್ಯಕ್ಷ ಮಾಡಲು ಹೊರಟಿದ್ದಾರೆ. ನಿಮಗೆ ಸಾಮಾನ್ಯ ಜನರ, ರೈತರ ಬಗ್ಗೆ ಗೌರವ, ಕಾಳಜಿಯಿದ್ದಲ್ಲಿ ಬೇರೊಬ್ಬರ ಹೆಸರು ಈ ಸ್ಥಾನಗಳಿಗೆ ಸೂಚಿಸಬಹುದಾಗಿತ್ತು. ಇದು ನಿಮ್ಮ ಸ್ವಾರ್ಥ, ಕುಟುಂಬ ರಾಜಕಾರಣಕ್ಕೆ ಹಿಡಿದ ಕನ್ನಡಿಯಾಗಿದೆ. ನಿಮ್ಮನ್ನು ಮತದಾರರು ಯಾವುದೇ ಕಾರಣಕ್ಕೂ ಸ್ವೀಕರಿಸಲಾರರು ಎಂದರು.
ರಾಹುಲ್ ಗಾಂಧಿಗೆ ತಂದು ನಿಲ್ಲಿಸಿ
ಬರುವ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್ ಕಾಂಗ್ರೆಸ್ನಿಂದ ಸ್ಪರ್ಧಿಸಿದರೆ ಸ್ವಾಗತಿಸುವೆ. ಆದರೆ ಈಶ್ವರ ಖಂಡ್ರೆ ಅವರಿಗೆ ಟಿಕೆಟ್ ಕೊಡಲು ಬಿಡುತ್ತಾರೆಯೇ ಎಂದು ಭಗವಂತ ಖೂಬಾ ವ್ಯಂಗ್ಯವಾಗಿ ನುಡಿದರು. ರಾಜಶೇಖರ ಪಾಟೀಲ್ ಏಕೆ, ಕಳೆದ ಸಲ ಸೋತಿರುವ ಈಶ್ವರ ಖಂಡ್ರೆ ನಿಂತರೂ ಮತ್ತೊಮ್ಮೆ ನೋಡೋಣ. ಅದು ಸಾಧ್ಯವಿಲ್ಲವಾದರೆ ನಿಮ್ಮ ನಾಯಕ ರಾಹುಲ್ ಗಾಂಧಿ ಅವರನ್ನೇ ಇಲ್ಲಿಗೆ ಕರೆತನ್ನಿ ಎಂದು ಖೂಬಾ ಸವಾಲು ಹಾಕಿದರು. ನಾನು ಯಾರ ಮನೆ ಒಡೆದಿಲ್ಲ. ಮನೆಯೊಡೆವ ಕೆಲಸ ಖಂಡ್ರೆ ಪರಿವಾರ ಮಾಡುತ್ತದೆ. ರಾಜಶೇಖರ ಪಾಟೀಲ್ ಸೋತಿದ್ದಕ್ಕೆ ಒಳಗೊಳಗೆ ಎಲ್ಲಕ್ಕಿಂತ ಹೆಚ್ಚು ಖುಷಿಪಟ್ಟಿದ್ದೇ ಈಶ್ವರ ಖಂಡ್ರೆ. ರಾಜಶೇಖರ ಸೋತ ಕಾರಣವೇ ನಿರಾಯಾಸ ಅವರು ಮಂತ್ರಿಯಾಗಿದ್ದಾರೆ ಎಂದು ಚಚ್ಚಿದರು. ಬರುವ ಚುನಾವಣೆಯಲ್ಲಿ ಯಾರೇ ನಿಂತರೂ ಜೆಡಿಎಸ್ ಜತೆಗೂಡಿ ಚುನಾವಣೆ ಎದುರಿಸಿ ಕಾಂಗ್ರೆಸ್‌ಗೆ 2 ಲಕ್ಷ ಮತಗಳ ಅಂತರದಿಂದ ಸೋಲಿಸುತ್ತೇವೆ ಎಂದರು. ಗ್ರಾಪಂ ಸದಸ್ಯನಾಗಲು ನಾನು ಅರ್ಹನಲ್ಲ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಖೂಬಾ, ನಿಮ್ಮಂಥ ಕನಿಷ್ಠ ವಿಚಾರ ಬುದ್ಧಿಯವರನ್ನು ನಾನು ನೋಡಿಲ್ಲ. ಬಿಜೆಪಿ ನನ್ನನ್ನು ಗ್ರಾಪಂ ಸದಸ್ಯನಾಗಿ ಮಾಡಲು ದುಡಿಸಿಕೊಂಡಿಲ್ಲ. ಟಿಕೆಟ್ ನೀಡಿ ಸಂಸದನಾಗಿ ಮಾಡಿ, ಮಂತ್ರಿ ಮಾಡಿದೆ ಎಂದರು.
ಸತ್ತಿದ್ದೀರಾ ಎಂದವರು ಯಾರು?
ಸತ್ತಿದ್ದೀರಾ ಎಂದು ನಿಮಗೆ ಅಂದವರು ಯಾರು ಎಂದು ಸಚಿವ ಭಗವಂತ ಖೂಬಾ ಅವರು ಮಾಜಿ ಸಚಿವ ರಾಜಶೇಖರ ಪಾಟೀಲ್ ಗೆ ಪ್ರಶ್ನಿಸಿದರು. ನೀವು (ಪಾಟೀಲ್) ಸೋತ ಬಳಿಕ ಖಂಡ್ರೆ ಮಂತ್ರಿ ಆದರು. ಇದನ್ನು ಸಹಿಸಲು ಆಗುತ್ತಿಲ್ಲ. ನೀವಿಬ್ಬರು ಬದ್ಧ ವೈರಿಗಳು. ಸುಳ್ಳರು, ಮೋಸಗಾರರು, ಲೂಟಿಕೋರರು, ಅವಕಾಶವಾದಿಗಳಾದ ನೀವಿಬ್ಬರು ನನ್ನ ವಿರುದ್ಧ ಆರೋಪ ಮಾಡಲು ಒಂದಾಗಿದ್ದೀರಿ. ಎಲ್ಲರೂ ಸೇರಿ ನನ್ನೊಬ್ಬನ ಮೇಲೆ ಮುಗಿಬೀಳುತ್ತಿದ್ದೀರಿ ಅಂದರೆ ನನ್ನ ಪ್ರಾಮಾಣಿಕತೆ ದೃಢಿಕರಿಸಿದ್ದೀರಿ ಎಂದರ್ಥ. ಪಾಟೀಲ್ ಬಿಎಸ್ಎಸ್ಕೆ ಬಗ್ಗೆ ಮಾತನಾಡಿದ್ದಾರೆ. ಎಲ್ಲರ ಅವಧಿಯ ತನಿಖೆ ಮಾಡಿಸುತ್ತೇವೆ ಎಂದಿದ್ದಾರೆ. ಮಾಡಿಸಿ. ನಿಮ್ಮ ಸರ್ಕಾರವೇ ಇದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ ಎಂದು ಹೇಳಿದರು.