ಭಾಲ್ಕಿ: ದೇಶದ ರಕ್ಷಣೆ ಮತ್ತು ಪ್ರಗತಿಯೇ ನಮ್ಮೆಲ್ಲರ ಧ್ಯೇಯವಾಗಬೇಕು ಎಂದು ಜೈಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ ಹೇಳಿದರು.
ಭಾತಂಬ್ರಾ ಗ್ರಾಮದಲ್ಲಿ ಜೈಭಾರತ ಮಾತಾ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ, ಲಾಲ್ ಬಹಾದೂರ್ ಶಾಸ್ತ್ರಿ ಜಯಂತ್ಯುತ್ಸವದಲ್ಲಿ ಮಾತನಾಡಿ, ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಯುವಶಕ್ತಿ ಹೊಂದಿರುವ ರಾಷ್ಟ್ರ ಭಾರತ. ಇತರ ದೇಶಗಳಿಗೆ ನಮ್ಮ ರಾಷ್ಟ್ರ ಮಾದರಿ ಆಗಿದೆ ಎಂದರು.
ಯುವಶಕ್ತಿ ದೇಶದ ಅಮೂಲ್ಯ, ಶಾಶ್ವತ ಸಂಪತ್ತು. ಹೀಗಾಗಿ ಯುವಕರು, ವಿದ್ಯಾರ್ಥಿಗಳು ದುಶ್ಚಟ, ದುರ್ಗುಣಗಳಿಂದ ದೂರವಿದ್ದು, ಸದ್ಗುಣಗಳನ್ನು ಮೈಗೂಡಿಸಿಕೊಂಡು ದೇಶ ಸೇವೆಗೆ ಸದಾ ಸಿದ್ಧರಿರಬೇಕು ಎಂದು ಕರೆ ನೀಡಿದರು.
ಜಹೀರಾಬಾದ್ ಮಲ್ಲಯ್ಯಗಿರಿ ಆಶ್ರಮದ ಪೀಠಾಧಿಪತಿ ಶ್ರೀ ಬಸವಲಿಂಗ ಅವಧೂತರು ಮಾತನಾಡಿ, ಮಹಾತ್ಮ ಗಾಂಧಿ, ಶಾಸ್ತ್ರಿ ಅವರ ನಿಸ್ವಾರ್ಥ ದೇಶ ಸೇವೆ, ತ್ಯಾಗದ ಫಲದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದರು.
ಜಗದ್ಗುರು ನಿರಂಜನ ಸಂಸ್ಥಾನ ಮಠದ ಶ್ರೀ ಶಿವಯೋಗೇಶ್ವರ ಸ್ವಾಮೀಜಿ ಮಾತನಾಡಿ, ಹವಾ ಮಲ್ಲಿನಾಥ ಮಹಾರಾಜರು ಜನರಲ್ಲಿ ರಾಷ್ಟ್ರ ಪ್ರೇಮ ಬೆಳೆಸಲು ಶ್ರಮಿಸುತ್ತಿರುವ ಕಾರ್ಯ ಮಾದರಿ ಎಂದು ಕೊಂಡಾಡಿದರು.
ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಯುವಕರು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.
ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿದರು. ಸಮಿತಿ ತಾಲೂಕು ಅಧ್ಯಕ್ಷ ಪಪ್ಪು ಪಾಟೀಲ್ ಖಾನಾಪುರ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಣೆ ಮಾಡಿದರು. ಮಹಾದೇವ ಮುತ್ತಂಗೆ ವಂದಿಸಿದರು. ಕಾರ್ಯಕ್ರಮದಲ್ಲಿ ಪೊಲೀಸರು, ರೈತರು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಲಾಯಿತು.
ಪೂಜ್ಯರ ಭವ್ಯ ಮೆರವಣಿಗೆ
ಭಾರತ ಮಾತೆ, ಮಹಾತ್ಮ ಗಾಂಧಿ, ಲಾಲ್ ಬಹಾದೂರ್ ಶಾಸ್ತ್ರಿ ಭಾವಚಿತ್ರಗಳೊಂದಿಗೆ ಪೂಜ್ಯರ ಭವ್ಯ ಮೆರವಣಿಗೆ ನಡೆಯಿತು. ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಡಿಜೆ ಸೌಂಡ್ ನಲ್ಲಿ ಮೊಳಗಿದ ದೇಶಭಕ್ತಿ ಗೀತೆ, ಸಿಡಿಮದ್ದುಗಳ ಸದ್ದಿನೊಂದಿಗೆ ಶುರುವಾದ ಮೆರವಣಿಗೆ ಊರಿನ ಪ್ರಮುಖ ವೃತ್ತಗಳ ಮೂಲಕ ಭವಾನಿ ಕಲ್ಯಾಣ ಮಂಟಪಕ್ಕೆ ಆಗಮಿಸಿತು. ಕುಂಭಕಳಸ ಹೊತ್ತ ಮಹಿಳೆಯರು ಹೆಜ್ಜೆ ಹಾಕುತ್ತ ಮೆರವಣಿಗೆಯ ಕಳೆ ಹೆಚ್ಚಿಸಿದರು.