ಬೀದರ್: ಆಯುರ್ವೇದ ಚಿಕಿತ್ಸಾ ಪದ್ಧತಿ ವಿಶ್ವಮಾನ್ಯತೆ ಪಡೆದಿದೆ ಎಂದು ಬೆಂಗಳೂರಿನ ರಾಜೀವ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಐ.ಎಸ್.ಎಂ. ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ ಎ.ಎಸ್. ಹೇಳಿದರು.
ನಗರದ ಎನ್.ಕೆ. ಜಾಬಶೆಟ್ಟಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಯುರ್ವೇದವು ವೈದ್ಯ ಲೋಕದ ಪ್ರಥಮ ಚಿಕಿತ್ಸೆಯಾಗಿದೆ. ನಮ್ಮ ಪೂರ್ವಜರು ಗಿಡಮೂಲಿಕೆಗಳಿಂದಲೇ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿಸಿದರು.
ಅಧ್ಯಯನ ನಿಂತ ನೀರಲ್ಲ. ಅದು ಹರಿಯುವ ಗಂಗೆ. ವೈದ್ಯ ಪದವಿ ಪಡೆದವರು ವೃತ್ತಿ ಮೌಲ್ಯ ಕಾಯ್ದುಕೊಳ್ಳುವ ಜತೆಗೆ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಡಾ. ಎನ್.ಜಿ. ಮೂಲಿಮನಿ ಮಾತನಾಡಿ, ವೈದ್ಯಕೀಯ ಕೋರ್ಸ್ ಪೂರೈಸಿದ ವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ತಮ್ಮನ್ನು ನಂಬಿಕೊಂಡ ರೋಗಿಗಳಿಗೆ ಕಾಳಜಿ ಪೂರ್ವಕ ಚಿಕಿತ್ಸೆ ಕೊಡಬೇಕು. ಸಾಮಾಜಿಕ ಕಳಕಳಿ ಹೊಂದಿರಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಚನ್ನಬಸಪ್ಪ ಹಾಲಹಳ್ಳಿ ಮಾತನಾಡಿ, ಓದು ಕೇವಲ ಪದವಿ ಪ್ರಮಾಣ ಪತ್ರಕ್ಕೆ ಸೀಮಿತವಾಗಬಾರದು. ಜೀವನದ ಉದ್ದಕ್ಕೂ ಜ್ಞಾನ ಹಾಗೂ ಕೌಶಲ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
75 ವಿದ್ಯಾರ್ಥಿಗಳಿಗೆ ಬಿ.ಎ.ಎಂ.ಎಸ್. ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು. ಸಂಸ್ಥೆಯ ಕೋಶಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಿರ್ದೇಶಕರಾದ ಶಿವಶರಣಪ್ಪ ಸಾವಳಗಿ, ಪ್ರಭುಶೆಟ್ಟಿ ಮುದ್ದಾ, ಉದಯಭಾನು ಹಲವಾಯಿ, ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ, ಆಸ್ಪತ್ರೆಯ ಮುಖ್ಯಸ್ಥ ಡಾ. ವಿಜಯಕುಮಾರ ಬಿರಾದಾರ, ಡಾ. ಅಶ್ವಿನ್‍ಕುಮಾರ, ಡಾ. ಚನ್ನಬಸವಣ್ಣ, ಡಾ. ಬಂಡೆಪ್ಪ, ಡಾ. ಜ್ಯೋತೆಪ್ಪ, ಡಾ. ಪ್ರವೀಣಕುಮಾರ ಸಿಂಪಿ, ಡಾ. ಮಹಾದೇವಿ, ಅನಿಲಕುಮಾರ ಬಚ್ಚಾ, ಉಪ ಪ್ರಾಚಾರ್ಯೆ ಡಾ. ಶ್ರೀದೇವಿ ಸ್ವಾಮಿ ಉಪಸ್ಥಿತರಿದ್ದರು. ಪ್ರಾಚಾರ್ಯೆ ಡಾ. ಚಂದ್ರಕಾಂತ ಹಳ್ಳಿ ಸ್ವಾಗತಿಸಿದರು. ಡಾ. ಶೈಲಜಾ ಹಾಗೂ ಡಾ. ಶುಬದಾ ನಿರೂಪಿಸಿದರು.