ಬೀದರ್: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದ ಗ್ರಾಮ ಲೆಕ್ಕಿಗ ಶೇಖರ ಬಿ.ಪವಾರ್ಗೆ ಇಲ್ಲಿನ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 1.50 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
8 ಸಾವಿರ ಲಂಚಕ್ಕಾಗಿ ಇದೀಗ ಪವಾರ್ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಆನಂದಶೆಟ್ಟಿ ಅವರು ಶನಿವಾರ ಶಿಕ್ಷೆ ಪ್ರಕಟಿಸಿದರು.
ಬಸವಕಲ್ಯಾಣ ತಾಲೂಕಿನ ಇಲ್ಯಾಳನ ವಿಶ್ವನಾಥ ಮಾರುತಿ ಕೊಳಸುರೆ ಅವರು 2013ನೇ ಸಾಲಿನ ಕೆಎಸ್ಆರ್.ಪಿ ಪೇದೆ ಹುದ್ದೆಗೆ ನೇಮಕಾತಿ ಹೊಂದಿದ್ದರಿಂದ, ಸಿಂಧುತ್ವ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲನೆ ಕುರಿತು ವರದಿ ತಯಾರಿಸಿ ಮೇಲಧಿಕಾರಿಗಳಿಗೆ ಕಳುಹಿಸಲು ಹಣ ನೀಡಬೇಕಾಗುತ್ತದೆ ಎಂದು 10 ಸಾವಿರ ರೂ. ಲಂಚಕ್ಕಾಗಿ ಗ್ರಾಮ ಲೆಕ್ಕಿಗ ಶೇಖರ್ ಪವಾರ್ ಬೇಡಿಕೆ ಇಟ್ಟದರು.
ವಿಶ್ವನಾಥ ಅವರಿಂದ 2014ರ ಫೆ.6ರಂದು ಬಸವಕಲ್ಯಾಣ ನಗರದ ಖಾಸಗಿ ಕಚೇರಿಯಲ್ಲಿ ಲಂಚದ ಹಣ ಮುಂಖಡವಾಗಿ 8 ಸಾವಿರ ರೂ. ಪಡೆಯುವಾಗ ಅನುಮಾನಗೊಂಡು ಹಣವನ್ನು ರಸ್ತೆ ಬದಿಯಲ್ಲಿ ಎಸೆದು ಗ್ರಾಮ ಲೆಕ್ಕಿಗ ಪವಾರ್ ಓಡಿಹೋಗುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಚರಣೆ ನಡೆಸಿ, ಹಿಡಿದಿದ್ದಾರೆ. ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ ಆರ್.ಎಸ್. ಜಹಾಗೀರದಾರ್ ತನಿಖೆ ನಡೆಸಿ, ದೋಷಾರೋಪಣೆ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದರು.
ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ವಿರುದ್ಧ ಆರೋಪಗಳನ್ನು ಸಾಬೀತು ಆಗಿದ್ದರಿಂದ ಶನಿವಾರ ತೀರ್ಪು ನೀಡಿ, ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 1.50 ಲಕ್ಷ ರೂ. ದಂಡ ವಿಧಿಸಿದರು. ದಂಡ ಭರಿಸಲು ತಪ್ಪಿದಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದರು. ಲೋಕಾಯುಕ್ತ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೇಶವರಾವ್ ಶ್ರೀಮಾಳೆ ವಾದ ಮಂಡಿಸಿದ್ದಾರೆ.
ದೂರುದಾರ ವಿರುದ್ಧ ಪ್ರಕರಣಕ್ಕೆ ಆದೇಶ
ಲಂಚ ಸ್ವೀಕಾರ ಪ್ರಕರಣದ ದೂರುದಾರ ವಿಶ್ವನಾಥ ಮಾರುತಿ ಕೊಳಸುರೆ ವಿರುದ್ಧವೇ ದೂರು ದಾಖಲಿಸಲು ಕೋಟ್೯ ಆದೇಶಿಸಿದೆ. ದೂರಿನ ವಿರುದ್ಧವಾಗಿ ವಿಶ್ವನಾಥ ಸುಳ್ಳು ಸಾಕ್ಷಿ ನೀಡಿದ್ದರಿಂದ ಪ್ರತ್ಯೇಕ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನ್ಯಾಯಾಧೀಶ ವಿಜಯಕುಮಾರ ಆನಂದಶೆಟ್ಟಿ ಅವರು ಆದೇಶ ನೀಡಿದ್ದಾರೆ.