ಬೀದರ್: ಹಲವು ವರ್ಷಗಳಿಂದ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಬಾಕಿ ಇದ್ದ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಖಾಕಿ ಪಡೆ, ತಲೆಮರೆಸಿಕೊಂಡಿದ್ದ 12 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯ ಎದುರು ಹಾಜರುಪಡಿಸಿದೆ.
ಜಿಲ್ಲೆಯ 10 ಠಾಣೆಗಳಲ್ಲಿನ 12 ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ವಿಶೇಷವೆಂದರೆ 58 ವರ್ಷದ ಹಳೆಯ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸಿ ಕೋಟ್೯ಗೆ ಹಾಜರುಪಡಿಸಿದ್ದಾರೆ.
ಮೇಹಕರ್ ಠಾಣೆ ವ್ಯಾಪ್ತಿಯಲ್ಲಿ 1965ರಲ್ಲಿ ವರದಿಯಾದ ಕಳ್ಳತನ ಪ್ರಕರಣ, ಬೀದರ್ ನಗರದಲ್ಲಿ 1993ರಲ್ಲಿನ ಕೊಲೆಗೆ ಪ್ರಯತ್ನ, 1995ರಲ್ಲಿನ ಗಾಯದ ಕೇಸ್, 2002ರಲ್ಲಿ ನೂತನ ನಗರ ಠಾಣೆ ವ್ಯಾಪ್ತಿಯ ಕಳವು, 2003ರಲ್ಲಿ ಬಿಕೆ ನಗರ ಮತ್ತು ಬೀದರ್ ನಗರ ಠಾಣೆ ವ್ಯಾಪ್ತಿಯಲ್ಲಿನ ಕಳ್ಳತನ, 2004ರಲ್ಲಿ ಹುಮನಾಬಾದ್ ಠಾಣೆ ವ್ಯಾಪ್ತಿಯ ಸ್ಪೋಟಕ ಕೇಸ್, 2009ರಲ್ಲಿ ಬಿಕೆ ನಗರ ವ್ಯಾಪ್ತಿಯ ಗಾಯದ ಕೇಸ್, 2010ರಲ್ಲಿ ಬಿಕೆ ಗ್ರಾಮೀಣ ಠಾಣೆಯ ಕೌಟುಂಬಿಕ ಕಲಹ, 2012ರಲ್ಲಿ ಜನವಾಡದ ಕೌಟುಂಬಿಕ ಕಲಹ, 2014ರಲ್ಲಿ ಹುಲಸೂರು ಠಾಣೆ ವ್ಯಾಪ್ತಿಯ ಗಾಯದ ಕೇಸ್ ಹಾಗೂ 2016ರಲ್ಲಿ ಹುಮನಾಬಾದ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಾಯದ ಪ್ರಕರಣವನ್ನು ಪತ್ತೆ ಮಾಡಿದ ಪೊಲೀಸರು, 12 ಆರೋಪಿಗಳನ್ನು ಬಂಧಿಸಿದ್ದಾರೆ.
ನನೆಗುದಿಗೆ ಬಿದ್ದಿದ್ದ ಲಾಂಗ್ ಪೆಂಡಿಂಗ್ ಕೇಸ್ (ಎಲ್ಪಿಸಿ)ಗಳಲ್ಲಿನ ಆರೋಪಿಗಳನ್ನು ಪತ್ತೆ ಹೆಚ್ಚಲು ಜಿಲ್ಲಾ ಮಟ್ಟದಲ್ಲಿ ವಿಭಾಗವಾರು ಮೂರು ವಿಶೇಷ ತಂಡ ಜೂನ್ ನಲ್ಲಿ ರಚಿಸಲಾಗಿತ್ತು. ಈ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶೇಷ ಪ್ರಯತ್ನಗಳಿಂದಾಗಿ ಹತ್ತು ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಹಲವು ವರ್ಷಗಳಿಂದ ಪತ್ತೆಯಾಗದೆ ನನೆಗುದಿಗೆ ಬಿದ್ದಂಥ ಪ್ರಕರಣಗಳನ್ನು ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಮೆಚ್ಚುಗೆ ವ್ಯಕ್ತಪಡಿಸಿ ನಗದು ಬಹುಮಾನ ಘೋಷಿಸಿದ್ದಾರೆ.
58 ವರ್ಷ ಬಳಿಕ ಬಂಧನ
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 58 ವರ್ಷ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 1965ರಲ್ಲಿ ಮೇಹಕರ್ ನಲ್ಲಿ ನಡೆದಿದ್ದ ಎರಡು ಎಮ್ಮೆ, ಒಂದು ಕರು ಕಳವಾದ ಕುರಿತು ಮುರಳೀಧರರಾವ್ ಕುಲಕರ್ಣಿ ಎಂಬುವರು ಮೇಹಕರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಘಟನೆ ನಂತರ ಮಹಾರಾಷ್ಟ್ರದ ಉದಗೀರ್ ಮೂಲದ ಕಿಶನ್ ಚಂದರ್ (30) ಮತ್ತು ಗಣಪತಿ ವಾಗ್ಮೋರೆ (20) ಅವರನ್ನು ಬಂಧಿಸಲಾಗಿತ್ತು. ಆದರೆ ಜಾಮೀನು ಪಡೆದ ಬಳಿಕ ಈ ಇಬ್ಬರು ನ್ಯಾಯಾಲಯಕ್ಕೆ ಬಾರದೆ ತಲೆಮರೆಸಿಕೊಂಡಿದ್ದರು. ಸಮನ್ಸ್, ವಾರಂಟ್ ಜಾರಿ ಮಾಡಿದ್ದರೂ ಹಾಜರಾಗಲಿಲ್ಲ. ಮೊದಲ ಆರೋಪಿ ಕಿಶನ್ ಮೃತಪಟ್ಟಿದ್ದರಿಂದ ಆತನ ವಿರುದ್ಧದ ಕೇಸ್ ರದ್ದಾಗಿದೆ. ಇನ್ನೊಬ್ಬ ಗಣಪತಿ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ವಿಶೇಷ ತಂಡ ಈತನನ್ನು ಪತ್ತೆ ಹಚ್ಚಿ ನ್ಯಾಯಾಲಯ ಎದುರು ಹಾಜರುಪಡಿಸಿದ್ದಾರೆ. ಕಳ್ಳತನ ನಡೆದಾಗ ಗಣಪತಿ ವಯಸ್ಸು 20, ಇದೀಗ 78 ವರ್ಷ.