ಜಿಲ್ಲೆ

ಬೆಂಗಳೂರಿನ ಈ ಆಟೋ ಚಾಲಕ ಬಳಸುವ ಟೆಕ್ನಾಲಜಿ ನೋಡಿದ್ರೆ ನಿಮ್ಮ ಹುಬ್ಬೇರುವುದು ಖಚಿತ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು, ಸ್ಟಾರ್ಟ್‌ಅಪ್‌ಗಳು ಮತ್ತು ಇತ್ತೀಚಿನ ತಂತ್ರಜ್ಞಾನಗಳಿಗೆ ಕೇರಾಫ್ ಅಡ್ರೆಸ್ ಎಂದರೆ ತಪ್ಪಾಗಲಾರದು. ಇಲ್ಲಿ ವಾಸಿಸುವ ಅನೇಕ ಜನರು ತಂತ್ರಜ್ಞಾನದ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ಇಲ್ಲಿನ ಸ್ಮಾರ್ಟ್ ಜನರು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗುತ್ತಲೇ ಇರುತ್ತಾರೆ. ನಗರವಾಸಿಗಳು ತಮಗೆ ವಿಶೇಷವಾಗಿ ಕಾಣುವ ವ್ಯಕ್ತಿಗಳ ಫೋಟೋ ಮತ್ತು ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಅಂದಹಾಗೆ ಬೆಂಗಳೂರನ್ನು ತಂತ್ರಜ್ಞಾನದ ಕೇಂದ್ರವೆಂದು ಹೇಳಬಹುದು. ಹೀಗಾಗಿಯೇ ಇದನ್ನು ಸಿಲಿಕಾನ್​ ವ್ಯಾಲಿ ಎಂದು ಕರೆಯುತ್ತಾರೆ. ಇದೀಗ, ಬೆಂಗಳೂರಿನ ಆಟೋ ಚಾಲಕರೊಬ್ಬರು ತಮ್ಮ ಸ್ಮಾರ್ಟ್ ವಾಚ್‌ನಲ್ಲಿ ಕ್ಯೂಆರ್ ಕೋಡ್ ತೋರಿಸಿ ಗ್ರಾಹಕರಿಂದ ಹಣ ತೆಗೆದುಕೊಳ್ಳುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ವೈರಲ್​ ಫೋಟೋದಲ್ಲಿ ಆಟೋ ಚಾಲಕ ಅತ್ಯಂತ ಆಧುನಿಕ ಮತ್ತು ಸ್ಮಾರ್ಟ್ ರೀತಿಯಲ್ಲಿ ಹಣವನ್ನು ಸ್ವೀಕರಿಸುತ್ತಿದ್ದಾನೆ. ಆಟೋ ಚಾಲಕನ ಆಲೋಚನೆಗಳು ಸಾಫ್ಟ್‌ವೇರ್ ಇಂಜಿನಿಯರ್ ಮಟ್ಟದಲ್ಲಿರುವುದು ಗಮನಾರ್ಹ.

ಆಟೋ ಚಾಲಕನ ಫೋಟೋ ನೋಡಿ ಹಲವರು ಅಚ್ಚರಿಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಹಾಡಿ ಹೊಗಳಿದ್ದಾರೆ. ಈ ಆಟೋ ಚಾಲಕ ನಮ್ಮೆಲ್ಲರಿಗಿಂತ ಬುದ್ಧಿವಂತರಾಗಿದ್ದಾರೆ ಎಂದು ನೆಟ್ಟಿಗರೊಬ್ಬರು ಹೇಳಿದರೆ, ಆಟೋ ಚಾಲಕರು ಕೂಡ ತುಂಬಾ ಸ್ಮಾರ್ಟ್ ಆಗಿಬಿಟ್ಟಿದ್ದಾರೆ ಎಂದು ಮತ್ತೊಬ್ಬ ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

ಇನ್ನು ಕೆಲವರು ಬೆಂಗಳೂರು ನಗರವನ್ನು ಹೊಗಳಿದ್ದಾರೆ. ಬೆಂಗಳೂರು ತುಂಬಾ ವಿಶೇಷವಾಗಿದೆ ಮತ್ತು ಬೆಂಗಳೂರನ್ನು ಭಾರತದ ತಂತ್ರಜ್ಞಾನ ನಗರವೆಂದು ಏಕೆ ಕರೆಯುತ್ತಾರೆ ಎಂಬುದು ನನಗೀಗ ಅರ್ಥವಾಗಿದೆ ಎಂದು ಹೇಳಿದ್ದಾರೆ. ಸದ್ಯ ಆಟೋ ಚಾಲಕನ ಫೋಟೋ ವೈರಲ್​ ಆಗುತ್ತಲೇ ಇದ್ದು, ಇದನ್ನು ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.