ಯಲ್ಲಾಪುರ: ಪ್ರಯಾಗರಾಜ್ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಭಾಗವಹಿಸಿದ ಅನೇಕರ ಸಮಾಗಮ, ಗಂಗಾ ಜಲದಿಂದ ಶತರುದ್ರಾಭಿಷೇಕ, ಕುಂಭಮೇಳದಲ್ಲಿ ಭಾಗವಹಿಸಿದವರಿಗೆ ಗೌರವ ಸಮರ್ಪಣೆ...ಇಂತಹ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ತಾಲೂಕಿನ ನಂದೊಳ್ಳಿ ಸಮೀಪದ ಭಟ್ರಕೇರಿಯ ಭಾರದ್ವಾಜ ಆಶ್ರಮ.
ಆರ್ಷವಿದ್ಯಾ ಟ್ರಸ್ಟ್ ಹಾಗೂ ಆಯುಷ್ಮಾನ್‌ಭವ ವಿಜಯೀಭವ ಬಳಗದಿಂದ ‘ಅಮೃತಾಭಿಷೇಕ’ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಮಹಾಕುಂಭ ಮೇಳದಲ್ಲಿ ಭಾಗವಹಿಸಿ, ಪುಣ್ಯಸ್ನಾನ ಮಾಡಿದ ಹಲವರು ಗಂಗಾಜಲದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರದ್ವಾಜೇಶ್ವರನಿಗೆ ಗಂಗಾ ಜಲದಿಂದ ಶತರುದ್ರಾಭಿಷೇಕ ನೆರವೇರಿಸಲಾಯಿತು. ಕುಂಭ ಮೇಳದಲ್ಲಿ ಭಾಗವಹಿಸಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಭಾರದ್ವಾಜಾಶ್ರಮದ ವಿವಿಧ ಪ್ರಕಲ್ಪಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಬಳಗದ ಮುಖ್ಯಸ್ಥ ಮಂಜುನಾಥ ಭಟ್ಟ ಭಟ್ರಕೇರಿ ಮಾತನಾಡಿ, ರಾಷ್ಟ್ರಕ್ಷೇಮ ಹಾಗೂ ರಾಷ್ಟ್ರದ ನೇತಾರರ ದೀರ್ಘಾಯುಷ್ಯದ ಸಂಕಲ್ಪದೊಂದಿಗೆ ನಮ್ಮ ಬಳಗ ರಾಜ್ಯಾದ್ಯಂತ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ಈವರೆಗೆ 307 ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಬ್ರಹ್ಮ ಮತ್ತು ಕ್ಷಾತ್ರ ಒಟ್ಟಾಗಿ ಮುನ್ನಡೆದರೆ ಮಾತ್ರ ಸನಾತನ ಪರಂಪರೆ ಉಳಿಯಲು ಸಾಧ್ಯ ಎಂಬುದು ಇತಿಹಾಸದಿಂದ ತಿಳಿಯುವ ಸಂಗತಿ. ಅದೇ ಸಂಕಲ್ಪದಿಂದ ನಾವೆಲ್ಲ ಮುಂದುವರಿದರೆ ನಮ್ಮ ಸಂಸ್ಕೃತಿಯ ಬೇರು ಇನ್ನಷ್ಟು ಗಟ್ಟಿಯಾಗಲು ಸಾಧ್ಯ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿಯಲಿದೆ ಎಂದರು.
ಡಾ. ಮಹೇಶ ಭಟ್ಟ ಇಡಗುಂದಿ ಅವರು ರಚಿಸಿದ ಸಪ್ತರ್ಷ್ಯಾಷ್ಟಕವನ್ನು ಬಿಡುಗಡೆಗೊಳಿಸಲಾಯಿತು. ಸನಾತನ ಪರಂಪರೆಯ ಬಗ್ಗೆ ಅನಾದರ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಸಪ್ತರ್ಷಿಗಳ ಅನುಗ್ರಹದಿಂದ ಅದು ದೂರವಾಗಬೇಕು. ಸನಾತನ ಧರ್ಮ, ಆಚರಣೆಗಳ ಬಗ್ಗೆ ಶ್ರದ್ಧೆ ಹೆಚ್ಚಲೆಂಬ ಆಶಯದೊಂದಿಗೆ ಅಷ್ಟಕ ರಚಿಸಿರುವುದಾಗಿ ತಿಳಿಸಿದರು.
ನಂತರ ಮಾಗೋಡಿನ ಶ್ರೀ ವೀರಮಾರುತಿ ತಾಳಮದ್ದಲೆ ಕೂಟದ ಕಲಾವಿದರಿಂದ ಗಂಗಾವತರಣ ತಾಳಮದ್ದಲೆ ನಡೆಯಿತು.
ಕುಂಭ ಮೇಳದಿಂದ ಬಂದ ಗಂಗಾ ಜಲದೊಂದಿಗೆ ಭಾರದ್ವಾಜಾಶ್ರಮದ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಚಾಲನೆ ನೀಡುವ ಈ ಮಾದರಿ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ನೂರಾರು ಜನ ಭಾಗಿಯಾಗಿದ್ದರು.
ಧಾರ್ಮಿಕ ಕೇಂದ್ರವಾಗಿ ರೂಪಿಸುವ ಯೋಜನೆ
ಭಾರದ್ವಾಜ ಆಶ್ರಮವನ್ನು ಸನಾತನ ಧಾರ್ಮಿಕ ಕೇಂದ್ರವನ್ನಾಗಿ ರೂಪಿಸುವುದು ಬಳಗದ ಉದ್ದೇಶ. ಗುರುಕುಲ, ಗೋಶಾಲೆ, ಯಾಗಶಾಲೆ, ಯೋಗಕೇಂದ್ರ, ಕಲ್ಯಾಣಿ, ನಕ್ಷತ್ರ ವನ, ರಾಶಿ ವನ, ನವಗ್ರಹವನಗಳನ್ನು ನಿರ್ಮಿಸುವ ಯೋಜನೆ ಹೊಂದಲಾಗಿದೆ. ಕುಂಭಮೇಳದ ಗಂಗಾಜಲದಿಂದ ರುದ್ರಾಭಿಷೇಕ ಮಾಡಿ, ವೃಕ್ಷಾರೋಪಣ ಮಾಡುವ ಮೂಲಕ ಈ ಯೋಜನೆಗಳಿಗೆ ಚಾಲನೆ ನೀಡಿರುವುದು ವಿಶೇಷ.
ಆಶ್ರಮವನ್ನು ವಿದ್ಯಾಕೇಂದ್ರ, ಶೃದ್ಧಾಕೇಂದ್ರ, ಯೋಗ ಕೇಂದ್ರವಾಗಿ ರೂಪಿಸಲಿದ್ದೇವೆ. ಹಿಂದೆ ಋಷಿಮುನಿಗಳು ಆಶ್ರಮದಲ್ಲಿ ರೂಪಿಸಿದ ಸನಾತನ ಧಾರ್ಮಿಕ ವಾತಾವರಣ ನಿರ್ಮಾಣ ನಮ್ಮ ಸಂಕಲ್ಪ. ಗಂಗಾಜಲದಿಂದ ಶತರುದ್ರಾಭಿಷೇಕದ ಮೂಲಕ ಶುಭಾರಂಭಗೊಂಡಿದೆ. ಮಂಜುನಾಥ ಭಟ್ಟ ಭಟ್ರಕೇರಿ, ಆಯುಷ್ಮಾನ್‌ಭವ, ವಿಜಯೀಭವ ಬಳಗದ ಮುಖ್ಯಸ್ಥ