ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಬೆಣಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಕಲ್ ಗ್ರಾಮಕ್ಕೆ ಮೊದಲ ಬಾರಿಗೆ ಸಾರಿಗೆ ಬಸ್ ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ಬಸ್‌ಗೆ ಹೂವಿನ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ತಾ.ಪಂ. ಮಾಜಿ ಸದಸ್ಯ ಶೇಖರ್ ಮಾತನಾಡಿ, ಗ್ರಾಮದಲ್ಲಿ 200ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಶಾಲೆ ಮಕ್ಕಳು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು, ರೇಷ್ಮೆ ಹಾಗೂ ಪಶುಪಾಲನೆ ಇಲಾಖೆ ಸಚಿವ ಕೆ.ವೆಂಕಟೇಶ್ ಅವರನ್ನು ಸಂಪರ್ಕಿಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಬಸ್ ಸಂಪರ್ಕ ಕಲ್ಪಿಸಿದ್ದಾರೆ. ಅವರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದ ತಿಳಿಸುವುದಾಗಿ ಹೇಳಿದರು.
ಜಿ.ಪಂ. ಮಾಜಿ ಸದಸ್ಯೆ ಕಾವೇರಿ ಶೇಖರ್, ಬೆಣಗಾಲು ಗ್ರಾ.ಪಂ. ಸದಸ್ಯ ಪ್ರಕಾಶ್, ಪ್ರಭಾಕರ್, ಲೀಲಾವತಿ, ಮಂದಾರ, ದಯಾನಂದ, ಗೋವಿಂದರಾಜು, ಮಂಜುಳಾ ಹರೀಶ್, ಸಣ್ಣಯ್ಯ, ಪುರುಷೋತ್ತಮ, ಸತ್ಯಭಾಮ, ಶಶಿಕಲಾ, ಲಕ್ಷ್ಮಿ ಇತರರು ಇದ್ದರು.