ಕಾರವಾರ : ಮಣ್ಣಿನ ವಿಗ್ರಹಗಳನ್ನು ಮಾತ್ರ ತಯಾರಿಸಿ ಪೂಜಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ, ನಗರಸಭೆ ಸಾರ್ವಜನಿಕರಲ್ಲಿ, ವಿಗ್ರಹ ತಯಾರಕರಲ್ಲಿ ವಿನಂತಿಸಿದೆ.
ಮಂಡಳಿಯ ಪ್ರಾದೇಶಿಕ ಕಚೇರಿಯ ಉಪ ಪರಿಸರ ಅಧಿಕಾರಿ ಡಾ. ಗಣಪತಿ ಹೆಗಡೆ, ನಗರಸಭೆ ಪರಿಸರ ಅಧಿಕಾರಿ ಯಾಖೂಬ್ ಶೇಖ್ ನಗರದ ವಿವಿಧ ವಿಗ್ರಹ ತಯಾರಕರನ್ನು ಭೇಟಿಯಾಗಿ ಈ ಕುರಿತು ತಿಳುವಳಿಕೆ ನೀಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾಯ್ದೆಯನ್ವಯ ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ವಿಗ್ರಹಗಳನ್ನು ತಯಾರಿಸಿ ಬಳಸುವುದು ಅಪರಾಧವಾಗಿದೆ.
ಹಾಗಾಗಿ ಕೇವಲ ಮಣ್ಣಿನ ವಿಗ್ರಹಗಳನ್ನು ಮಾತ್ರ ತಯಾರಿಸಿ ಪೂಜಿಸಬೇಕು. ವಿಗ್ರಹಕ್ಕೆ ನೀರಿನ ಬಣ್ಣಗಳನ್ನು ಮಾತ್ರ ಉಪಯೋಗಿಸಬೇಕು ಎಂದು ಸೂಚಿಸಿದರು.
ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಸೂಚಿಸಿರುವ ಎಲ್ಲ ಷರತ್ತುಗಳನ್ನು ಪಾಲಿಸಿ ಭಕ್ತಿ ಭಾವದಿಂದ ಗಣೇಶ ಹಬ್ಬವನ್ನು ಆಚರಿಸಬೇಕಾಗಿ ನಗರಸಭೆಯ ಪೌರಾಯುಕ್ತರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.