ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೈಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಶುಕ್ರವಾರ ಮಹಾನವಮಿ ಅಂಗವಾಗಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಉತ್ಸವಾದಿ ವಾಹನಗಳು ಹಾಗೂ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ವಿಜಯದಶಮಿಯ ಅಂಗವಾಗಿ ದೇಗುಲವನ್ನು ವಿವಿಧ ಪುಷ್ಪ, ತಳಿರು-ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನ ಜಾವ 3.30ರಿಂದ 6.30ರವರೆಗೆ ಮಾದಪ್ಪನ ಸನ್ನಿಧಿಯಲ್ಲಿ ಬೇಡಗಂಪಣ ಸಂಪ್ರದಾಯದಂತೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸ್ವಾಮಿಗೆ ಅಭಿಷೇಕ, ಬಿಲ್ವಾರ್ಚನೆಯ ಮೂಲಕ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು. ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದ್ದ ಚಿನ್ನದ ತೇರು, ಬಂಗಾರದ ತೇರು ಸೇರಿದಂತೆ ಹುಲಿ, ಬಸವ ಹಾಗೂ ರುದ್ರಾಕ್ಷಿ ಉತ್ಸವಾದಿ ವಾಹನಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸಲಾಯಿತು. ಈ ವೇಳೆ ಸಾಕಾನೆ ಉಮಾ ಮಹೇಶ್ವರಿ ಭಾಗಿಯಾಗಿತ್ತು.
ರಾತ್ರಿ ದೇಗುಲದಲ್ಲಿ ತ್ರಿಕಾಲ ಪೂಜೆಯನ್ನು ನೆರವೇರಿಸಿದ ಬಳಿಕ ಉಪವಾಸವಿದ್ದ ಬೇಡಗಂಪಣ ಅರ್ಚಕರು ಮಡಿ ವಸ್ತ್ರ ಧರಿಸಿ, ಸ್ವಾಮಿಯ ಪಟ್ಟದ ಕತ್ತಿ, ಬಂಗಾರದ ಆಯುಧಗಳನ್ನು ಹೊತ್ತು ಸತ್ತಿಗೆ, ಸೂರಿಪಾನಿ, ಛತ್ರಿ ಚಾಮರ, ನಂದಿ ಧ್ವಜಕಂಬ, ತಮಟೆ, ನಗಾರಿ, ಜಾಗಟೆ ಹಾಗೂ ಮಂಗಳವಾದ್ಯಮೇಳದೊಂದಿಗೆ ನಂದನವನದ ಮಜ್ಜನ ಬಾವಿಗೆ ತೆರಳಿದರು. ಪಟ್ಟದ ಕತ್ತಿ, ಖಡ್ಗಗಳು, ಗಂಡುಗುಂಡಲಿ, ಎಡಮುರಿ, ಬಲಮರಿ ಇತರ ಆಯುಧಗಳನ್ನಿಟ್ಟು ಬ್ರಹ್ಮಸ್ತೋತ್ರದ ಪೂಜೆಯ ಜತೆಗೆ ಸಾಂಪ್ರದಾಯಿಕ ಪೂಜೆಯನ್ನು ನೆರವೇರಿಸಿದರು. ಸ್ವಾಮಿಗೆ ಫಲ ತಾಂಬೂಲ ನೈವೇದ್ಯ ಅರ್ಪಿಸಿ ಮಹಾ ಮಂಗಳಾರತಿ ಬೆಳಗಿಸಲಾಯಿತು. ಕಂಕಣ ಕಟ್ಟಿಸಿಕೊಂಡ ಬೇಡಗಂಪಣ ಅರ್ಚಕರು ವಿವಿಧ ಆರತಿ ಸೇವೆಗಳನ್ನು ನೆರವೇರಿಸಿದರು.
ಆಯುಧಗಳಿಗೆ ಪೂಜೆ: ಬಳಿಕ ಆಯುಧಗಳನ್ನು ಹೊತ್ತ ಅರ್ಚಕರು ಮೆರವಣಿಗೆಯ ಮೂಲಕ ದೇಗುಲಕ್ಕೆ ಆಗಮಿಸಿ 3 ಸುತ್ತು ಪ್ರದಕ್ಷಿಣೆ ಹಾಕಿದರು. ದಕ್ಷಿಣ ದ್ವಾರದ ಮಹಾಗಣಪತಿ ಸನ್ನಿಧಿಯಲ್ಲಿ ಮಂಗಳಾರತಿ ಬೆಳಗಿಸಿ ಬೂದುಕುಂಬಳಕಾಯಿ ಹೊಡೆದು ದೃಷ್ಟಿ ತೆಗೆಯಲಾಯಿತು. ಬಳಿಕ ಪಟ್ಟದ ಉಯ್ಯಲೆ ಮಂಟಪದಲ್ಲಿ ಆಯುಧಗಳನ್ನಿರಿಸಿ 3 ರೀತಿಯ ಗೋಪುರದ ಆರತಿ ಹಾಗೂ ನೈವೇದ್ಯ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಶಿವಶಕ್ತಿ ಉತ್ಸವ, ವೀರಭದ್ರಸ್ವಾಮಿ, ಬಂಡಳ್ಳಿ ಬಸವ, ಗಾಳಿ ಬಸವೇಶ್ವರ ವಿಗ್ರಹಮೂರ್ತಿ, ಬೆಳ್ಳಿಸತ್ತಿಗೆ, ದೊಡ್ಡ ಸತ್ತಿಗೆ ಹಾಗೂ ನಂದಿಕಂಬಗಳಿಗೂ ಪೂಜೆ ಸಲ್ಲಿಸಲಾಯಿತು. ಶಿವಪಾರ್ವತಿ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ 3 ಬಾರಿ ಪ್ರದಕ್ಷಿಣೆ ಹಾಕಿಸಲಾಯಿತು.
ಶಿವಶಕ್ತಿಯ ಆರಾಧನೆ: ಮೈಸೂರು ಅರಸರು ನೀಡಿದ್ದ ಬಂಗಾರದ ದಾಳಿಂಬೆಯ ವಜ್ರಾಭರಣ ಕಿರೀಟ, ಬಂಗಾರದ ಕೊರಂಬು, ಮುತ್ತಿನ ಹಾರಗಳ ಪದಕ, ಮೈಸೂರು ರಾಜ ಮನೆತನದ ಗಂಡಭೇರುಂಡ ಲಾಂಛನದ ವಜ್ರ, ಮುತ್ತು ಹಾಗೂ ರತ್ನಗಳಿಂದ ಶಿವ, ಪಾರ್ವತಿ ಉತ್ಸವಮೂರ್ತಿಯನ್ನು ಸಿಂಗರಿಸಲಾಯಿತು. ಸಿಂಗರಿಸಿದ್ದ ಶರನ್ನವರಾತ್ರಿ ತೂಗುಯ್ಯಲೆ ಮಂಟಪಕ್ಕೆ ಕರೆತಂದು ಕೂರಿಸಲಾಯಿತು. ಸಾಂಪ್ರದಾಯಿಕ ಹಾಡುಗಳನ್ನು ಹಾಡುವುದರ ಮೂಲಕ ತೊಟ್ಟಿಲು ತೂಗುತ್ತಾ, ಬಿಲ್ವಾರ್ಚನೆ, ನೈವೇದ್ಯ ಇತರ ಸೇವೆಗಳನ್ನು ನೆರವೇರಿಸಲಾಯಿತು. ಮಹಾಮಂಗಳಾರತಿ ಬೆಳಗಿಸಿ ಶಿವಶಕ್ತಿಯ ಆರಾಧನೆ ಮಾಡಲಾಯಿತು.
ಜಿಟಿಜಿಟಿ ಮಳೆಯ ನಡುವೆಯೂ ಚಿನ್ನದ ತೇರಿನ ಉತ್ಸವ: ಪ್ರತಿನಿತ್ಯ ಸಂಜೆ 7ಕ್ಕೆ ಚಿನ್ನದ ತೇರಿನ ಉತ್ಸವವು ಜರುಗುತ್ತದೆ. ಆದರೆ ಶುಕ್ರವಾರ ಸಂಜೆ 6.45ರಲ್ಲಿ ಜಿಟಿಜಿಟಿ ಆರಂಭವಾಯಿತು. ಆದರೂ ಎಂದಿನಂತೆ ತೇರಿನ ಉತ್ಸವವನ್ನು ನೆರವೇರಿಸಲಾಯಿತು. ಭಕ್ತರು ಜಿಟಿಜಿಟಿ ಮಳೆಯ ನಡುವೆಯೂ ಉತ್ಸವದಲ್ಲಿ ಭಾಗಿಯಾಗಿ, ದಂಡಿನ ಕೋಲನ್ನು ಹೊತ್ತು ಸಾಗಿದರು. ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಭಕ್ತಿಭಾವವನ್ನು ಮೆರೆದರು.
ಈ ಸಂದರ್ಭದಲ್ಲಿ ಗುಂಡೇಗಾಲ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ಉಪಕಾರ್ಯದರ್ಶಿ ಚಂದ್ರಶೇಖರ್, ದೇಗುಲದ ಪ್ರಧಾನ ಆಗಮಿಕ ಕರವೀರಸ್ವಾಮಿ, ಬೇಡಗಂಪಣ ಅರ್ಚಕರು ಹಾಗೂ ಪ್ರಾಧಿಕಾರದ ನೌರರು ಇದ್ದರು.
ಹೆಚ್ಚಾದ ಭಕ್ತರ ದೌಡು: ವಿಜಯದಶಮಿ ಹಿನ್ನೆಲೆಯಲ್ಲಿ ಶನಿವಾರ ಚಾ.ನಗರ, ಬೆಂಗಳೂರು, ಮಂಡ್ಯ, ರಾಮನಗರ, ಚನ್ನಪಟ್ಟಣ, ಇತರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮ.ಬೆಟ್ಟಕ್ಕೆ ಭೇಟಿ ನೀಡಿದ್ದರಲ್ಲದೇ ಮೈಸೂರಿನಲ್ಲಿ ದಸರಾ ಜಂಬೂಸವಾರಿ ಮುಗಿದ ಬಳಿಕ ಪ್ರವಾಸಿಗರು ಹಾಗೂ ಭಕ್ತರ ದೌಡೇ ಮ.ಬೆಟ್ಟಕ್ಕೆ ಹರಿದು ಬಂತು. ಇದರಿಂದ ಹನೂರು ಮಾರ್ಗದಲ್ಲಿ ಮಧ್ಯಾಹ್ನದ ಬಳಿಕ ವಾಹನ ದಟ್ಟಣೆ ಹೆಚ್ಚಾಗಿಯೇ ಇತ್ತು. ಆಗಮಿಸಿದ ಭಕ್ತರು ದೇವರ ದರ್ಶನ ಪಡೆದರಲ್ಲದೇ ಹರಕೆ ಹೊತ್ತ ಭಕ್ತರು ಮುಡಿಸೇವೆ, ಉರುಳು ಸೇವೆ ಹಾಗೂ ಪಂಜಿನ ಸೇವೆಯನ್ನು ನೆರವೇರಿಸಿದರು.
ಹುಲಿ, ರುದ್ರಾಕ್ಷಿ ಹಾಗೂ ಬಸವ ಉತ್ಸವಾದಿ ಸೇವೆಗಳಲ್ಲಿ ಭಾಗಿಯಾಗಿದ್ದರು. ಭಾನುವಾರ ರಜೆ ಇರುವ ಹಿನ್ನೆಲೆ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ಶ್ರೀಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ದಾಸೋಹ ವ್ಯವಸ್ಥೆ, ಕುಡಿಯುವ ನೀರು ಹಾಗೂ ಇನ್ನಿತರೆ ಮೂಲ ಸೌಕರ್ಯಕ್ಕೆ ಮುಂಜಾಗ್ರತಾ ಕ್ರಮ ವಹಿಸಿದೆ.