ಜಿಲ್ಲೆ

ಗ್ರಾಮ ದೇವತೆ ಕಿಕ್ಕೇರಮ್ಮನ ಆಯುಧಗಳಿಗೆ ಪೂಜೆ

ಕಿಕ್ಕೇರಿ: ಆಯುಧ ಪೂಜೆ ಪ್ರಯುಕ್ತ ಬುಧವಾರ ಕಿಕ್ಕೇರಿ-ಲಕ್ಷ್ಮೀಪುರ ಜೋಡಿ ಗ್ರಾಮದ ಗ್ರಾಮದೇವತೆ ಕಿಕ್ಕೇರಮ್ಮನವರ ಆಯುಧಗಳಾದ ಕತ್ತಿ, ಗುರಾಣಿ, ಅಶ್ವವಾಹನವನ್ನು ಮೆರವಣಿಗೆ ಮಾಡಲಾಯಿತು.

ಗ್ರಾಮದ ಹೊರವಲಯದಲ್ಲಿನ ಕಿಕ್ಕೇರಮ್ಮ ದೇಗುಲದಲ್ಲಿರುವ ದೇವಿಯ ವಾಹನ, ಮತ್ತಿತರ ಆಯುಧಗಳನ್ನು ಶುಚಿಗೊಳಿಸಿ ಪೂಜೆ ಸಲ್ಲಿಸಲಾಯಿತು.

ಗ್ರಾಮದ ಹೊರವಲಯದಿಂದ ದೇವಿಯ ಆಯುಧಗಳಾದ ಕತ್ತಿ, ಗುರಾಣಿ ಮತ್ತಿತರರ ಸಾಮಗ್ರಿ, ಕುದುರೆ ವಾಹನ ಮತ್ತಿತರ ವಸ್ತುಗಳನ್ನು ತೊಟ್ಟಿಲಿನಲ್ಲಿಟ್ಟು ಮಂಗಳವಾದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು. ಹೊಸಬೀದಿ, ರಥಬೀದಿ, ಕೋಟೆಗಣಪತಿ ಬೀದಿ, ಕೆ.ಎಸ್. ನರಸಿಂಹಸ್ವಾಮಿ ಬೀದಿ, ಸುಬ್ಬರಾಯರ ಛತ್ರದ ಬೀದಿಗಳಲ್ಲಿ ಸಾಗಿತು. ಈ ವೇಳೆ ಭಕ್ತರು ತೊಟ್ಟಿಲಿನಲ್ಲಿನ ದೇವಿ ವಾಹನ, ಆಯುಧಗಳಿಗೆ ಪೂಜೆ ಸಲ್ಲಿಸಿದರು.

ಹೋಬಳಿಯಾದ್ಯಂತ ವಿವಿಧ ಅಂಗಡಿಗಳಲ್ಲಿ, ರೈತರು ಕೃಷಿ ಪರಿಕರ, ವಾಹನ ಮಾಲೀಕರು ವಾಹನಗಳನ್ನು ಶುಚಿಗೊಳಿಸಿ ಪೂಜಿಸಿ ಸಿಹಿ ಹಂಚಿ ಬೂದು ಗುಂಬಳ ಹೊಡೆದು ದೃಷ್ಟಿ ಪೂಜೆ ನೆರವೇರಿಸಿದರು.