ಜಿಲ್ಲೆ

ಹಠಯೋಗಿ ಗುಬ್ಬಿನಂಜುಂಡೇಶ್ವರ ಶ್ರೀಗಳ ಪುಣ್ಯಾರಾಧನೆ

ಬ್ಯಾಡಗಿ: ಸನಾತನ ಕಾಲದಿಂದಲೂ ಮಠ, ಧರ್ಮಕೇಂದ್ರಗಳು ಸೇರಿದಂತೆ ಧರ್ಮಗುರುಗಳು ಹಾಗೂ ಸನ್ಯಾಸಿಗಳಿಗೆ ಪೂಜ್ಯನೀಯ ಸ್ಥಾನ ನೀಡುವ ಮೂಲಕ ಪುಣ್ಯಾರಾಧನೆ ಕಾರ್ಯಕ್ರಮ ಪರಂಪರಾಗತವಾಗಿ ನಡೆದುಬಂದಿದೆ ಎಂದು ಉದ್ಯಮಿ ವೀರಬಸಯ್ಯ ಹಾವೇರಿಮಠ ತಿಳಿಸಿದರು.

ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಲಿಂ. ಗುಬ್ಬಿನಂಜುಂಡೇಶ್ವರ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮ ಅವರು ಮಾತನಾಡಿದರು.

ಐದಾರು ದಶಕಗಳ ಹಿಂದೆ ಲಿಂ. ಗುಬ್ಬಿನಂಜುಂಡೇಶ್ವರ ಶ್ರೀಗಳು ನಡೆದಾಡುವ ದೇವರಾಗಿದ್ದು, ಧರ್ಮಪ್ರಸಾರದಲ್ಲಿ ತೊಡಗಿದ್ದರು. ಹಾವೇರಿ ಜಿಲ್ಲೆಯ ಹೊಂಕಣ, ಮೋಟೆಬೆನ್ನೂರು, ಕುರುಬಗೊಂಡ, ಹಿರೇಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಸಂಚಾರಿಗಳಾಗಿ ಧರ್ಮಪ್ರಸಾರದಲ್ಲಿ ತೊಡಗಿದ ಅವರು ಇಂದಿಗೂ ಭಕ್ತರ ಮನಸಿನಲ್ಲಿ ಉಳಿಸಿದ್ದಾರೆ. ಹಠಯೋಗಿ ಹಾಗೂ ದೊಡ್ಡಸಾಧಕರೆಂದೆ ಪ್ರಸಿದ್ಧಿಯಾಗಿರುವ ಅವರು ಸಿದ್ಧಿಪುರುಷರಾಗಿ ಅಧ್ಯಾತ್ಮವನ್ನು ಮೈತುಂಬಿಕೊಂಡಿದ್ದರು. ಎಲ್ಲರೂ ಅವರಿಗೆ ಅಜ್ಜಯ್ಯ ಎಂದು ಪೂಜ್ಯ ಭಾವನೆಯಿಂದ ಕಾಣುತ್ತಿದ್ದರು ಅಲ್ಲದೆ, ಸುತ್ತಮುತ್ತಲಿನ ಎಲ್ಲ ಗ್ರಾಮಗಳಲ್ಲಿ ಅವರ ಮುಂದಾಳತ್ವದಲ್ಲಿ ಜಾತ್ರೆ, ಉತ್ಸವಗಳು ನಡೆಯುತ್ತಿದ್ದವು. ಮೋಟೆಬೆನ್ನೂರು ಗ್ರಾಮದಲ್ಲಿ ಅವರ ಪರಮ ಭಕ್ತರಿದ್ದು, ದೇವಸ್ಥಾನದಲ್ಲಿ ನಿತ್ಯ ಆರಾಧನೆ ಧರ್ಮ ಕಾರ್ಯಕ್ರಮಗಳು ಮುಂದುವರಿದಿವೆ ಎಂದರು.

49ನೇ ಪುಣ್ಯಾರಾಧನೆ ಅಂಗವಾಗಿ ಗುಬ್ಬಿನಂಜುಂಡೇಶ್ವರ ಶ್ರೀಗಳ ಬೃಹತ್ ಭಾವಚಿತ್ರವನ್ನು ಟ್ರ್ಯಾಕ್ಟರ್​ನಲ್ಲಿಟ್ಟು ಗ್ರಾಮದ ತುಂಬೆಲ್ಲ, ಬಾಜಾ ಭಜಂತ್ರಿ ಕುಂಭೋತ್ಸವದೊಂದಿಗೆ ಭಕ್ತಿಯಿಂದ ಮೆರವಣಿಗೆ ನಡೆಸಲಾಯಿತು.

ಉತ್ಸವದಲ್ಲಿ ರಕ್ತದಾನ ಶಿಬಿರ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾವೇರಿ, ಉತ್ಥಾನ ಗ್ರಾಮೀಣ ವಿಕಾಸ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಗುಬ್ಬಿ ನಂಜುಂಡೇಶ್ವರ ಶ್ರೀಗಳ ಪುಣ್ಯಸ್ಮರಣೆ ನಿಮಿತ್ತ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಗ್ರಾಮದ 16 ಜನ ರಕ್ತದಾನ ಮಾಡಿದರು. ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಉದ್ಯಮಿ ಯುವರಾಜ ಬಳ್ಳಾರಿ, ಗ್ರಾಮಸ್ಥರಾದ ಅಣ್ಣಪ್ಪ ಪೀಠದ, ವೆಂಕಟೇಶ ತಳವಾರ, ಪ್ರಶಾಂತ ಗೊರವರ, ಮಂಜುನಾಥ ಬೆನಕನಕೊಂಡ, ನಿಂಗರಾಜ ಶಂಭು ಹಾವನೂರು, ಈರಯ್ಯ ಹಿರೇಮಠ, ರಾಮನಗೌಡ್ರ ಪಾಟೀಲ, ಪ್ರವೀಣ ಬೆನ್ನೂರು, ಪ್ರಕಾಶ ಬನ್ನಿಹಟ್ಟಿ, ಸುಭಾಸ ಬನ್ನಿಹಟ್ಟಿ, ಇತರರಿದ್ದರು.