ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ. ಹಾಂಗ್ಯೋ ಐಸ್‌ಕ್ರೀಮ್‌ನ ದಿನೇಶ ಪೈ, ಗಣ್ಯರಾದ ಯೊಗೇಶ ಕಾಮತ್, ಜಗದೀಶ ಪೈ, ಪವನ ಪ್ರಭು, ಸಂತೋಷ ಆಚಾರ್ಯ, ಸಂಜಯ ಭಟ್, ಪ್ರಸನ್ನಾ ಬಿಚು ಇತರರು ಇದ್ದರು. 
ಜಿಲ್ಲೆ

ಅಯೋಧ್ಯೆಯಲ್ಲಿ ಶ್ರೀಗಳಿಂದ ರಾಮ ದೇವರ ಅರ್ಚನೆ

ಭಟ್ಕಳ: ಪರ್ತಗಾಳಿ ಜೀವೋತ್ತಮ ಮಠ ಸ್ಥಾಪನೆಯಾಗಿ 550 ವರ್ಷಗಳಾದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಬದರಿಯಿಂದ ಆರಂಭವಾದ ಶ್ರೀ ರಾಮ ದಿಗ್ವಿಜಯ ರಥಯಾತ್ರೆಗೆ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಭರ್ಜರಿ ಸ್ವಾಗತ ದೊರಕಿದೆ.

ಅಕ್ಟೋಬರ 19ರಂದು ಬದರಿಯಲ್ಲಿ ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಜಿಯವರು ಪೂಜೆ ಸಲ್ಲಿಸುವ ಮೂಲಕ ರಥಯಾತ್ರೆಗೆ ಚಾಲನೆ ನೀಡಿದ್ದರು. ಈ ರಥಯಾತ್ರೆಯು ಅ. 23ರಂದು ಅಯೋಧ್ಯೆ ತಲುಪಿದೆ.

ರಥಯಾತ್ರೆಯೊಂದಿಗೆ ಅಯೋಧ್ಯೆಗೆ ಆಗಮಿಸಿದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರಿಗೆ ಸ್ಥಳೀಯ ಶಾಸಕ ವೇದ ಪ್ರಕಾಶ ಗುಪ್ತಾ, ವಿಶ್ವ ಹಿಂದು ಪರಿಷತ್‌ನ ಕಾರ್ಯದರ್ಶಿ ಗೋಪಾಲಜೀ, ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಅದ್ದೂರಿ ಸ್ವಾಗತ ನೀಡಿದರು.

ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಅಯೋಧ್ಯೆ ಶ್ರೀರಾಮ ಮಂದಿರದ ರಾಮ ದರ್ಬಾರ್ ಹಾಲಿನಲ್ಲಿ ರಾಮದೇವ, ವೀರವಿಠಲ ದೇವರನ್ನು ಪೂಜಿಸಿದರು. ಬಳಿಕ ಶ್ರೀರಾಮ ನಾಮ ತಾರಕ ಮಹಾ ಮಂತ್ರದ ಜಪಾಭಿಯಾನ ನಡೆಯಿತು. ಇದೇ ವೇಳೆ ಅಯೋಧ್ಯಾಪತಿ ಶ್ರೀ ರಾಮಲಲ್ಲಾನಿಗೆ ರಾಮದರ್ಬಾರದ ಚಿತ್ರವಿರುವ ಬಂಗಾರದ ಆಭರಣವನ್ನು ಶ್ರೀಗಳು ಅರ್ಪಿಸಿದರು. ಜಿಎಸ್‌ಬಿ ಸಮಾಜದ ಗಣ್ಯರು ಸಂತೋಷದ ಕ್ಷಣಕ್ಕೆ ಸಾಕ್ಷಿಯಾದರು.

ಅಲ್ಲಿಂದ ತೆರಳಿದ ದಿಗ್ವಿಜಯ ರಥಯಾತ್ರೆ ಮಧ್ಯಪ್ರದೇಶದ ಜಬಲಾಪುರದ ಜಗದ್ಗುರು ಶಂಕರಾಚಾರ್ಯರ ಆಶ್ರಮಕ್ಕೆ ತೆರಳಿ ಸೋಮವಾರ ಸಂಜೆ ಮಹಾರಾಷ್ಟ್ರದ ಅಂಬಾದೇವಿ ಸಂಸ್ಥಾನಕ್ಕೆ ಬಂದು ತಲುಪಿದೆ.

ಹಾಂಗ್ಯೋ ಐಸ್‌ಕ್ರೀಮ್‌ನ ದಿನೇಶ ಪೈ, ಗಣ್ಯರಾದ ಯೊಗೇಶ ಕಾಮತ್, ಜಗದೀಶ ಪೈ, ಪವನ ಪ್ರಭು, ಸಂತೋಷ ಆಚಾರ್ಯ, ಸಂಜಯ ಭಟ್, ಪ್ರಸನ್ನಾ ಬಿಚ್ಚು ಪುಣೆ ಮತ್ತಿತರರಿದ್ದರು. ರಥದೊಂದಿಗೆ ಭಟ್ಕಳದ ಗಿರಿಧರ ನಾಯಕ, ಶ್ರೀನಿವಾಸ ಕಾಮತ, ಶರಣ ಆಚಾರ್ಯ, ಆನಂದ ಭಟ್ ಇತರರು ಸಾಗಿದರು.