ಜಿಲ್ಲೆ

ಘಟ ಸ್ಥಾಪನೆ, ದೇವಿಯ ಆರಾಧನೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಾಡಹಬ್ಬ ದಸರಾ ಆಚರಣೆಗೆ ನಾಡಿನಾದ್ಯಂತ ಸೋಮವಾರದಿಂದ ವಿಧ್ಯುಕ್ತ ಚಾಲನೆ ದೊರೆತಿದೆ. ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡುವ ನವರಾತ್ರಿ ಹಬ್ಬ ವಿಶೇಷವಾಗಿ ಮಹಿಳೆಯರಿಗೆ ಹಿಗ್ಗು ತಂದಿದೆ. ಜಿಲ್ಲೆಯಲ್ಲಿ ಸೋಮವಾರ ಘಟ ಸ್ಥಾಪನೆಯೊಂದಿಗೆ ದಸರಾ ಮಹೋತ್ಸವ ಆರಂಭಗೊ0ಡಿದ್ದು, ವಿಜಯ ದಶಮಿಯವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ದಸರಾ ಪ್ರಯುಕ್ತ ಮನೆಗಳನ್ನು ಸ್ವಚ್ಛಗೊಳಿಸಿ ವಾರಗಟ್ಟಲೇ ತಯಾರಿ ನಡೆದಿತ್ತು. ಸೋಮವಾರ ಮನೆಗಳಲ್ಲಿ ಘಟ ಸ್ಥಾಪನೆ ಮಾಡಿ ಮುಂದಿನ 9 ದಿನಗಳ ಕಾಲ ದೀಪ ಆರದಂತೆ ನೋಡಿಕೊಳ್ಳಲಾಗುತ್ತದೆ. ಕುಟುಂಬ ಸಮೇತರಾಗಿ ದೇವಿಯ ಪಾರಾಯಣ ಮಾಡುತ್ತಾರೆ. ನಿತ್ಯ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.

ಮಹಿಳೆಯರು ನಿತ್ಯ ಬೆಳಗ್ಗೆ ಆರತಿಯೊಂದಿಗೆ ಗ್ರಾಮದ ಬನ್ನಿ ಮರಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತು ದೇವಿಯನ್ನು ಆರಾಧಿಸುತ್ತಾರೆ.

ಮತ್ತೊಂದೆಡೆ ಯಲ್ಲಮ್ಮ, ಕರಿಯಮ್ಮ, ದುರ್ಗಾದೇವಿ, ಇತರ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊ0ಡವು. ದೇವಿಗೆ ನಿತ್ಯ ಒಂದೊ0ದು ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ಮಹಿಳೆಯರು ನಸುಕಿನಲ್ಲೇ ಆರತಿಯೊಂದಿಗೆ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.