ಜಿಲ್ಲೆ

ಬಸವೇಶ್ವರ ಪುತ್ಥಳಿಗೆ ಗಬ್ಬೂರು ಗ್ರಾಮಸ್ಥರಿಂದ ಪೂಜೆ

ಹುಬ್ಬಳ್ಳಿ: ಇಲ್ಲಿನ ಗಬ್ಬೂರು ಬೈಪಾಸ್ ವೃತ್ತದಲ್ಲಿ ಗ್ರಾಮಸ್ಥರು ಸೋಮವಾರ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ವೃತ್ತದಲ್ಲಿ ಬಸವೇಶ್ವರರ ಪುತ್ಥಳಿ ಸ್ಥಾಪನೆಗೆ ಅನುಮತಿ ನೀಡಬೇಕು ಎಂದು ಪಾಲಿಕೆಗೆ ಮನವಿ ಮಾಡಿದರು.

ವೃತ್ತದಲ್ಲಿನ ಬಸವೇಶ್ವರರ ಭಾವಚಿತ್ರ ಸ್ವಚ್ಛಗೊಳಿಸಿ ಹೂವಿನ ಹಾರ ಹಾಕಿ ಪೂಜೆ ಮಾಡಿ ಸಿಹಿ ಹಂಚಿದರು. ಬೈಪಾಸ್ ರಸ್ತೆಗೆ ಬಸವೇಶ್ವರ ರಸ್ತೆ ಎಂದು 2001ರಲ್ಲೇ ಪಾಲಿಕೆ ಠರಾವು ಮಾಡಿದೆ. ವೃತ್ತದಲ್ಲಿ ಬಸವೇಶ್ವರರ ಪುತ್ಥಳಿ ಸ್ಥಾಪಿಸಿ, ಬಸವೇಶ್ವರ ವೃತ್ತ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ. ಬಸವೇಶ್ವರರ ಪುತ್ಥಳಿ ಬಿಟ್ಟು ಬೇರೆ ಯಾವ ಪುತ್ಥಳಿ ಸ್ಥಾಪನೆಗೂ ಬಿಡುವುದಿಲ್ಲ ಎಂದು ಗ್ರಾಮಸ್ಥರು ಹೇಳಿದರು.

ಡಾ. ರಾಜಕುಮಾರ್ ಪುತ್ಥಳಿ ನಿರ್ವಿುಸುವ ಮೂಲಕ ಡಾ. ರಾಜ್ ವೃತ್ತ ಎಂದು ನಾಮಕರಣ ಮಾಡುತ್ತಾರೆ ಎಂಬ ತಪ್ಪು ತಿಳಿವಳಿಕೆ ಗ್ರಾಮಸ್ಥರಲ್ಲಿ ಇತ್ತು. ಆ ರೀತಿ ಯೋಚನೆ ಇಲ್ಲ. ಬಸವೇಶ್ವರರ ಪುತ್ಥಳಿ ಸ್ಥಾಪಿಸಿ ಬಸವೇಶ್ವರ ವೃತ್ತ ಎಂದೇ ನಾಮಕರಣ ಮಾಡಲು ನಮ್ಮ ಸಹಕಾರವಿದೆ. ಗ್ರಾಮಸ್ಥರ ಅನುಮತಿಯೊಂದಿಗೆ ಪಕ್ಕದಲ್ಲಿ ಡಾ. ರಾಜ್ ಪುತ್ಥಳಿ ಸ್ಥಾಪಿಸುವ ಚಿಂತನೆ ಇದೆ ಎಂದು ಶಿವಾನಂದ ಮುತ್ತಣ್ಣವರ ತಿಳಿಸಿದರು.

ಪಾಲಿಕೆ ಮಾಜಿ ಸದಸ್ಯರಾದ ವಿಜನಗೌಡ ಪಾಟೀಲ, ಗಬ್ಬೂರು, ಹಳೇ ಗಬ್ಬೂರು ಗ್ರಾಮದ ಮಂಜುನಾಥ ಹೂಗಾರ, ಬಸವರಾಜ ಅಳಗವಾಡಿ, ಚನ್ನಪ್ಪ ಮಾಯಣ್ಣವರ, ಹೊನ್ನಪ್ಪ ಕೂಗೋಡ, ದ್ಯಾಮಣ್ಣ ತಳವಾರ, ರಾಮಣ್ಣ ಹಿರಗಣ್ಣವರ, ವೆಂಕಟೇಶ ಮುತಗಾರ, ಬಸವರಾಜ ಸತ್ತೂರ, ಶಿವಪ್ಪ ಮುಧೋಳ, ಮತ್ತಿತರರು ಇದ್ದರು.