ತ್ಯಾಮಗೊಂಡ್ಲು ಹೋಬಳಿಯ ಹಾದಿ ಹೊಸಹಳ್ಳಿಯಲ್ಲಿ ಶ್ರೀ ಅಮೃತೇಶ್ವರ ಸ್ವಾಮಿ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು, ಮಣ್ಣಿ ಗ್ರಾಪಂ ಉಪಾಧ್ಯಕ್ಷ ಭೈರೇಶ್​, ಸದಸ್ಯ ತಿಪ್ಪಶೆಟ್ಟಿಹಳ್ಳಿ ಶ್ರೀನಿವಾಸ್​, ಹಾದಿಹೊಸಹಳ್ಳಿ ಸರ್ವೆ ಜನ ಗ್ರಾಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್​.ಮಹಾದೇವಯ್ಯ,ಜಾಂಚಿ ಚಂದ್ರಶೇಖರ್​, ಚಿಕ್ಕಬಸಪ್ಪ, ನಾಗರಾಜ್​ ಇದ್ದರು. 
ಜಿಲ್ಲೆ

ಪೂರ್ವ ಜನುಮದ ಕರ್ಮ ಕಳೆಯಲು ಶಿವನ ಪೂಜಿಸಿ

ತ್ಯಾಮಗೊಂಡ್ಲು: ಹಾದಿ ಹೊಸಹಳ್ಳಿ ಗ್ರಾಮ ಚಿಕ್ಕದಾದರೂ ಶಕ್ತಿಯಲ್ಲಿ ಉನ್ನತ ಮಟ್ಟದಲ್ಲಿದೆ. ಪೂರ್ವ ಜನ್ಮದಲ್ಲಿ ಮನುಷ್ಯರು ಮಾಡಿದ ಕರ್ಮಗಳನ್ನು ಕಳೆಯಲು ಶಿವಪೂಜೆ ಮತ್ತು ಲಿಂಗ ಪೂಜೆಯಿಂದ ಸಾಧ್ಯವಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ನೆಲಮಂಗಲ ತಾಲೂಕು ಹಾದಿ ಹೊಸಹಳ್ಳಿಯಲ್ಲಿ ಶುಕ್ರವಾರ ಶ್ರೀ ಅಮೃತೇಶ್ವರ ಸ್ವಾಮಿ ದೇವಸ್ಥಾನ ಉದ್ಘಾಟಿಸಿ, ಇಷ್ಟಲಿಂಗ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.

ಯಾವ ಧರ್ಮದಲ್ಲಿ ಹುಟ್ಟಿದರೂ ಆಡಿದ ಮಾತಿನಂತೆ ನಡೆದುಕೊಳ್ಳಬೇಕು. ಎಲ್ಲರಿಗೂ ಅವರದೇ ಆದ ಧರ್ಮ ಇದೆ, ಅದರಂತೆ ಇರಬೇಕು. ಜಗತ್ತಿನಲ್ಲಿ ಆಸ್ತಿಕ, ನಾಸ್ತಿಕರಿದ್ದರೂ ತನ್ನ ಕೊನೆಯ ಸಮಯದಲ್ಲಿ ನಾಸ್ತಿಕರು ದೇವರು ಇರವನ್ನು ಒಪ್ಪಿರುವುದೂ ಇದೆ. ದೇವನೊಬ್ಬ ನಾಮ ಹಲವು ಎಂಬಂತೆ ಯಾವುದೇ ಹೆಸರಿನಿಂದ ದೇವರನ್ನು ಕರೆದರೂ ಅದು ಭಗವಂತನಿಗೆ ತಲುಪುತ್ತದೆ ಎಂದರು.

ಕೊರಟಗೆರೆ ತಾಲೂಕಿನ ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ದಿನ ಹಾದಿಹೊಸಹಳ್ಳಿ ಗ್ರಾಮಕ್ಕೆ ಐತಿಹಾಸಿಕ ದಿನ. ಸಣ್ಣ ಗ್ರಾಮಕ್ಕೆ ರಂಭಾಪುರಿ ಗುರುಗಳನ್ನು ಆಹ್ವಾನಿಸಿ ಅವರಿಂದ ಇಷ್ಟ್ಟಲಿಂಗ ಪೂಜೆ ನೆರವೇರಿಸಿ ಭಕ್ತರಿಗೆ ಅದರ ನೇರ ದರ್ಶನ ಮಾಡಿಸಿರುವುದು. ಇಷ್ಟಲಿಂಗ ಪೂಜೆಯನ್ನು ಗುರುಗಳ ಸಮ್ಮುಖದಲ್ಲೆ ನೋಡುವುದು ಅತ್ಯಂತ ಪುಣ್ಯದ ಕ್ಷಣ, ಈ ಗ್ರಾಮದಲ್ಲಿ ಯುವಜನಾಂಗ ಧಾರ್ಮಿಕ ಕಾರ್ಯಗಳನ್ನು ಅತ್ಯಂತ ಉತ್ಸಾಹದಿಂದ, ಶ್ರದ್ಧೆಯಿಂದ ನಡೆಸಿಕೊಟ್ಟಿದ್ದಾರೆ. ಇದರಿಂದಲೇ ಗ್ರಾಮದ ಧಾರ್ಮಿಕ ಶ್ರದ್ಧೆ ಬಗ್ಗೆ ತಿಳಿಯುತ್ತದೆ ಎಂದು ಶ್ಲಾಘಿಸಿದರು. ನೆಲಮಂಗಲ ಶಾಸಕ ಎನ್​.ಶ್ರೀನಿವಾಸ್​ ಮಾತನಾಡಿ, ಮನುಷ್ಯನಿಗೆ ಎಷ್ಟೇ ಒತ್ತಡವಿದ್ದರೂ ಆತ ಒಂದು ಬಾರಿ ದೇವಾಲಯಕ್ಕೆ ಹೋಗಿ ಕೆಲ ನಿಮಿಷಗಳನ್ನು ಅಲ್ಲಿ ಕಳೆದರೆ ಆತನಿಗೆ ಸಿಗುವ ನೆಮ್ಮದಿ, ಶಾಂತಿ ಬೇರೆಲ್ಲೂ ಸಿಗುವುದಿಲ್ಲ, ಸಮಾಜದಲ್ಲಿ ಧರ್ಮ ಮಾತ್ರ ಉಳಿಯುತ್ತದೆ. ಅಧರ್ಮ ಕೇವಲ ತಾತ್ಕಾಲಿಕವಾಗಿ ದೊರೆಯುವ ಅಲ್ಪಶಾಂತಿಯಾಗಿರುತ್ತದೆ. ರಂಭಾಪುರಿ ಶ್ರೀಗಳ ಕೃಪೆ ಈ ಕ್ಷೇತ್ರದ ಮೇಲಿರಲಿ, ಅಮೃತೇಶ್ವರ ಎಲ್ಲರಿಗೂ ಒಳ್ಳೆದು ಮಾಡಲಿ ಎಂದರು.

ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಭಕ್ತಿ, ಶ್ರದ್ಧೆಯಿಂದ ಭಗವಂತನ ಸ್ಮರಿಸಬೇಕು. ದೇವಾಲಯಗಳು ಮನುಷ್ಯನ ನೆಮ್ಮದಿಯ ಕೇಂದ್ರಗಳಾಗಿವೆ, ಅಧರ್ಮದ ಹಿಂದೆ ಹೋದರೆ ನಮಗೆ ಅಶಾಂತಿ ದೊರೆಯುವುದರ ಜತೆಗೆ ಜೀವನವೇ ಡೋಲಾಯಮಾನವಾಗುತ್ತದೆ. ಪ್ರತಿಯೊಬ್ಬರು ಎಚ್ಚರಿಕೆಯಿಂದ ಧರ್ಮದ ಕಡೆ ನಡೆದಾಗ ಮಾತ್ರ ಮನುಕುಲದ ಜೀವನ ಸಾರ್ಥಕವಾಗುತ್ತದೆ ಎಂದರು.

ದೇವಸ್ಥಾನದ ಮಂಡಳಿಯಿಂದ ದಾನಿಗಳಿಗೆ ಸನ್ಮಾನಿಸಲಾಯಿತು. ಖಜಾಂಚಿ ಚಂದ್ರಶೇಖರ್​, ಚಿಕ್ಕಬಸಪ್ಪ, ರುದ್ರ ನಾಗರಾಜ್​, ಟ್ರಸ್ಟ್​ ಸದಸ್ಯರಾದ ಶಿವಕುಮಾರ್​, ಹನುಮಂತರಾಜು, ರವಿ, ವಿರುಪಾಕ್ಷ, ದೇವರಾಜು, ಮಹೇಶ್​, ಬನೇಶ್​, ಶಿವಪ್ರಸಾದ್​, ಸುವರ್ಣಮ್ಮ ಇದ್ದರು.