ಶೃಂಗೇರಿ ನರಸಿಂಹವನದ ಗುರುನಿವಾಸದಲ್ಲಿ ಶನಿವಾರ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. 
ಜಿಲ್ಲೆ

ಶೃಂಗೇರಿ ಜಗದ್ಗುರುಗಳಿಂದ ಪೂಜೆ

ಎಸ್.ಎನ್.ರವೀಂದ್ರ

ಶೃಂಗೇರಿ: ತಾಲೂಕಿನಲ್ಲಿ ಶನಿವಾರ ಗಣಪತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮನೆಗಳಲ್ಲಿ ಗಣಪತಿಮೂರ್ತಿ ಪ್ರತಿಷ್ಠಾಪಿಸಿ ಹೂ ಹಾಗೂ ಗರಿಕೆಗಳಿಂದ ಅಲಂಕರಿಸಿ, ಮೋದಕ, ಪಂಚಕಜ್ಜಾಯ ನೈವೇದ್ಯದ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ರಾತ್ರಿ ಪುನಃ ಗಣಪತಿಗೆ ಪೂಜೆ ಸಲ್ಲಿಸಿ ಮನೆಗಳ ಸಮೀಪದ ನದಿಯಲ್ಲಿ ಮೂರ್ತಿ ವಿಸರ್ಜಿಸಲಾಯಿತು.

ಪಟ್ಟಣದ ಡಾ. ವಿ.ಆರ್.ಗೌರೀಶಂಕರ್ ಸಭಾಂಗಣ, ಕಾಂಚೀನಗರ, ಕಲ್ಕಟ್ಟೆ, ಅಡ್ಡಗದ್ದೆ, ಬೇಗಾರು, ವೈಕುಂಠಪುರ, ಸಿಂದೋಡಿ, ತೆಕ್ಕೂರು ಮುಂತಾದ ಕಡೆ ಸಾರ್ವಜನಿಕ ಗಣಪತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಆನೆಗುಂದ, ಹಿಂಬ್ರಳ್ಳಿ, ನೆಮ್ಮಾರ್,ನಲ್ಲೂರು, ಕೆರೆಕಟ್ಟೆ ಮುಂತಾದ ದೇವಾಲಯಗಳಲ್ಲಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಶ್ರೀ ಮಲಹಾನಿಕರೇಶ್ವರ ಸ್ತಂಭಗಣಪತಿ, ಮಠದ ಶಕ್ತಿಗಣಪತಿ, ತೋರಣಗಣಪತಿ, ಪ್ರವಚನ ಮಂದಿರದ ಗಣಪತಿಗೆ ನೈವೇದ್ಯ ಸಮೇತ ಪೂಜೆಯನ್ನು ಪುರೋಹಿತರು ಸಲ್ಲಿಸಿದರು. ನರಸಿಂಹವನದ ಗುರುನಿವಾಸದಲ್ಲಿ ಉಭಯಶ್ರೀಗಳು ಮಧ್ಯಾಹ್ನ ವರಸಿದ್ಧಿ ವಿನಾಯಕನಿಗೆ ಪೂಜೆ ಸಲ್ಲಿಸಿದರು. ಮಠದಲ್ಲಿ ಸಹಸ್ರ ಮೋದಕ ಹೋಮ ನೆರವೇರಿತು. ಶ್ರೀ ಮಹಾಗಣಪತಿ ವಾಕ್ಯಾರ್ಥವಿದ್ವತ್ ಸಭೆ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನೆರವೇರಿತು. ನಾನಾಪ್ರಾಂತ್ಯಗಳಿಂದ ಆಗಮಿಸಿದ್ದ ಶಾಸವಿದ್ವಾಂಸರು ಬೆಳಗ್ಗೆ 9 ಗಂಟೆಯಿಂದ 11ರ ತನಕ ಮತ್ತು ಸಂಜೆ 4ರಿಂದ ರಾತ್ರಿ 9ರವರೆಗೆ ನಡೆದ ಗೋಷ್ಠಿಯಲ್ಲಿ ವೇದಾಂತ, ಮಿಮಾಂಸಾ, ನ್ಯಾಯ, ವ್ಯಾಕರಣ, ಶಾಸಾರ್ಥ ಚರ್ಚೆ ನಡೆಸಿದರು. ನಂತರ ಶ್ರೀ ಸಭಾಗಣಪತಿಗೆ ಮಹಾಮಂಗಳಾರತಿ, ಅಷ್ಟಾವಧಾನ ಸೇವೆ ಜರುಗಿತು. ವಾಕ್ಯಾರ್ಥ ವಿದ್ವತ್ ಸಭೆ ಸೆ.19ರ ತನಕ ನೆರವೇರಲಿದೆ.