ಜಿಲ್ಲೆ

ಮನೆಯಲ್ಲೇ ಅಯ್ಯಪ್ಪನ ಆರಾಧಿಸಿ

ತುಮಕೂರು: ಶಬರಿಮಲೈ ಸ್ವಾಮಿ ಅಯ್ಯಪ್ಪ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷರಾಗಿ ಪುನರಾಯ್ಕೆಯಾಗಿರುವ ಟಿ.ಬಿ.ಶೇಖರ್ ಅವರನ್ನು ನಗರ ವೀರಶೈವ ಸಮಾಜ ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ಸರಳ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶೇಖರ್, ಕರೊನಾ ಹಿನ್ನೆಲೆಯಲ್ಲಿ ಶಬರಿ ಮಲೈ ಸನ್ನಿಧಾನದಲ್ಲಿ ಹೆಚ್ಚಿನ ಭಕ್ತರು ಸೇರುವಂತಿಲ್ಲ. ಸೌಕರ್ಯ ಕೊರತೆಗಳ ಹಿನ್ನೆಲೆಯಲ್ಲಿ 2020-21ನೇ ಸಾಲಿಗೆ ನಿಮ್ಮ ಮನೆಗಳಲ್ಲೇ ವ್ರತಾಚರಣೆ ಮಾಡಿ, ಸ್ಥಳದ ದೇವಾಲಯಗಳಲ್ಲೇ ಇರುಮುಡಿ ಅರ್ಪಿಸಿ ಪೂಜೆ ಹಾಗೂ ವ್ರತಾಚರಣೆ ಪೂರ್ಣಗೊಳಿಸಿ ಎಂದು ತಿಳಿಸಿದರು.

ಕೇರಳದ ಶಬರಿಮಲೈ ಆಕ್ಷನ್ ಕೌನ್ಸಿಲ್, ಹಿಂದು ಆರ್ಗನೈಸೇಷನ್, ಇತರ ಹಿಂದು ಸಮಾಜದ ಹಲವು ಮಠಾಧೀಶರು, ಸಂತರು ಬೈಠಕ್ ಮಾಡಿ ನಿರ್ಣಯ ಕೈಗೊಂಡಿದ್ದಾರೆ ಎಂದರು. ವೀರಶೈವ ಸಮಾಜ ಸೇವಾ ಸಮಿತಿ ಖಜಾಂಚಿ ಶಿವಲಿಂಗಮ್ಮ ಮಾತನಾಡಿ, ಟಿ.ಬಿ.ಶೇಖರ್ ಅವರು ಶಬರಿ ಮಲೈ ಅಯ್ಯಪ್ಪ ಸೇವಾ ಸಮಾಜಂ ಅಧ್ಯಕ್ಷರಾಗಿ ಎರಡನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ. ಎಲ್ಲ ಸಮಾಜಗಳಿಗೆ, ಸಂಘ ಸಂಸ್ಥೆಗಳಿಗೆ ಮಾದರಿಯಾಗಿ ಕೆಲಸ ಮಾಡಿರುವ ಅವರು ಮತ್ತಷ್ಟು ಉನ್ನತ ಮಟ್ಟಕ್ಕೇರಲಿ ಎಂದು ಆಶಿಸಿದರು. ವೀರಶೈವ ಸೇವಾ ಸಮಾಜದ ಗೌರವ ಕಾರ್ಯದರ್ಶಿ ಅತ್ತಿರೇಣುಕಾನಂದ, ನಿರ್ದೇಶಕರಾದ ಕೆ.ಎಸ್. ನಾಗರಾಜು, ಟಿ.ಆರ್.ನಟರಾಜ್, ಕೆ.ಜಿ.ಶಿವಕುಮಾರ್, ಕೆ.ಎಸ್.ವಿಶ್ವನಾಥ್, ಬಿ.ಆರ್.ಮಲ್ಲೇಶಯ್ಯ, ಸುಮ ಪ್ರಸನ್ನಕುಮಾರ್ ಇದ್ದರು.

ಜಿ.ಎಸ್.ಸೋಮಣ್ಣಗೆ ಸಂತಾಪ: ಇತ್ತೀಚೆಗೆ ನಿಧನರಾದ ಭೂಮಿ ಬಳಗದ ಅಧ್ಯಕ್ಷ ಜಿ.ಎಸ್.ಸೋಮಣ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಟಿ.ಬಿ.ಶೇಖರ್, ನನ್ನ 60ನೇ ವರ್ಷದಲ್ಲಿ ಜಿ.ಎಸ್.ಸೋಮಣ್ಣ ಅವರು ನೊರೆಹಾಲು ಎಂಬ ಅಭಿನಂದನಾ ಗ್ರಂಥ ಹೊರತಂದಿದ್ದರು. ಅದಕ್ಕಿಂತ ಮುಂಚೆಯಿಂದಲೂ ಅವರ ಜತೆ ಒಡನಾಟದಲ್ಲಿದ್ದೆ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಸೋಮಣ್ಣ ಪ್ರಮುಖ ಕಾರಣರು. ಸಭೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಂಕೋಚದಿಂದ ಹಿಂದೆ ಸರಿಯುತ್ತಿದ್ದ ನನ್ನನ್ನು ಮುಖ್ಯವಾಹಿನಿಗೆ ತರುವಲ್ಲಿ ಸೋಮಣ್ಣ ಅವರ ಪಾತ್ರ ಪ್ರಮುಖ ಎಂದು ಸ್ಮರಿಸಿದರು.