ಧಾರವಾಡ: ಪಿಓಪಿ ವಿಗ್ರಹಗಳು ನಮ್ಮ ಕೆರೆ, ನದಿ ಮತ್ತು ಇತರೆ ಜಲಮೂಲಗಳನ್ನು ಶಾಶ್ವತವಾಗಿ ಕಲುಷಿತಗೊಳಿಸುತ್ತವೆ. ಇದರಲ್ಲಿರುವ ರಾಸಾಯನಿಕ ಬಣ್ಣಗಳು ಜಲಚರಗಳಿಗೆ ಮಾರಕವಾಗಿದ್ದು, ಇವು ನೀರಿನಲ್ಲಿ ಸುಲಭವಾಗಿ ಕರಗುವುದಿಲ್ಲ. ಈ ಕಾರಣದಿಂದ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಂತೆ ಮತ್ತು ಸರ್ಕಾರದ ನಿರ್ದೇಶನದಂತೆ, ಜಿಲ್ಲೆಯಲ್ಲಿ ಪಿಓಪಿ ವಿಗ್ರಹಗಳ ತಯಾರಿಕೆ, ಮಾರಾಟ, ಸಂಗ್ರಹಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ವಿಗ್ರಹಗಳ ಬಳಕೆಯನ್ನು ತಡೆಗಟ್ಟಲು ಜಿಲ್ಲಾಡಳಿತವು ಕಠಿಣ ಕ್ರಮಗಳನ್ನು ಕೈಗೊಂಡು, ಕಾರ್ಯಾಚಣೆಯನ್ನು ಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಮಣ್ಣಿನ, ನೈಸರ್ಗಿಕ ಬಣ್ಣಗಳಿಂದ ಮಾಡಿದ, ಸುಲಭವಾಗಿ ನೀರಿನಲ್ಲಿ ಕರಗುವ ಗಣೇಶನ ವಿಗ್ರಹಗಳನ್ನೇ ಪೂಜಿಸಿ. ಈಗಾಗಲೇ ಅನೇಕರು ಪರಿಸರ ಸ್ನೇಹಿ ಗಣೇಶನಿಗೆ ಆದ್ಯತೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ವಿಷಯವಾಗಿದೆ. ನಮ್ಮ ಹಬ್ಬ, ನಮ್ಮ ಪರಿಸರ, ನಮ್ಮ ಜವಾಬ್ದಾರಿ. ಜಿಲ್ಲಾಡಳಿತದ ಈ ಕಾರ್ಯವು ಸಾರ್ವಜನಿಕರ ಸಹಕಾರವಿಲ್ಲದೆ ಸಂಪೂರ್ಣ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಪಿಓಪಿ ಮೂರ್ತಿ ವಶಕ್ಕೆ: ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ 184 ಪಿಓಪಿ ಗಣೇಶ ವಿಗ್ರಹಗಳು, ಅಣ್ಣಿಗೇರಿ ಪಟ್ಟಣದಲ್ಲಿ 46 ಪಿಓಪಿ ಗಣೇಶ ವಿಗ್ರಹಗಳು, ಧಾರವಾಡ ಗಾಂಧಿ ಚೌಕ್‍ದಲ್ಲಿ 21 ಪಿಓಪಿ ಗಣೇಶ ವಿಗ್ರಹಗಳು, ತಲವಾಯಿ ಗ್ರಾಮದಲ್ಲಿ 10 ಪಿಓಪಿ ವಿಗ್ರಹಗಳು, ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ 8 ಪಿಓಪಿ ಗಣೇಶ ವಿಗ್ರಹಗಳು, ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ 91 ಪಿಓಪಿ ಗಣೇಶ ವಿಗ್ರಹಗಳು ಸೇರಿದಂತೆ ಆಗಸ್ಟ್ 25, 2025 ವರೆಗೆ ಒಟ್ಟು 360 ಪಿಓಪಿ ವಿಗ್ರಹಗಳನ್ನು ಜಿಲ್ಲೆಯಾದ್ಯಂತ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪರಿಸರಾಧಿಕಾರಿಗಳು ಧಾರವಾಡ ಮತ್ತು ಹುಬ್ಬಳ್ಳಿ ಮಹಾನಗರ ಪಾಲಿಕೆ ಇಲಾಖೆಯಿಂದ ಹುಬ್ಬಳ್ಳಿಯ ಬೊಮ್ಮಾಪುರ ಓಣಿಯಲ್ಲಿ ತಪಾಸಣೆಯನ್ನು ನಡೆಸಿ, ಗಣೇಶ ವಿಗ್ರಹಗಳ ಮಾದರಿಗಳನ್ನು ಅಗಸ್ಟ್ 4, 2025 ರಂದು ಸಂಗ್ರಹಿಸಿ, ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಜಿಲ್ಲೆಯಲ್ಲಿ ಪಿಓಪಿ ಗಣಪತಿ ವಿಗ್ರಹಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ, ಪರಿಸರ ಇಲಾಖೆ, ಕಂದಾಯ ಇಲಾಖೆ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತಿಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದು, ಗ್ರಾಮ ಹಾಗೂ ತಾಲೂಕು ಮಟ್ಟದ, ಜಿಲ್ಲಾ ಮಟ್ಟದ ಕಾರ್ಯಪಡೆಗಳು ನಿರಂತರ ತಪಾಸಣೆ, ಪರಿಶೀಲನೆ ಕೈಗೊಳ್ಳುತ್ತಿವೆ. ಸಾರ್ವಜನಿಕರು ಮಣ್ಣಿನ ಗಣಪತಿಯನ್ನು ಪೂಜಿಸುವ ಮೂಲಕ ಪರಿಸರ ಸ್ನೇಹಿ ಗಣೇಶ ಚತುರ್ಥಿಯನ್ನು ಆಚರಿಸಬೇಕು. ನೆಲ, ಜಲ, ವಾಯು ಸೇರಿದಂತೆ ನಮ್ಮ ಪರಿಸರವನ್ನು ಕಾಪಾಡಬೇಕೆಂದು ಮತ್ತು ಜಿಲ್ಲಾಡಳಿತ, ಮಹಾನಗರ ಪಾಲಿಕೆಯ ಪ್ರಯತ್ನಗಳನ್ನು ಬೆಂಬಲಿಸಿ, ನೀಡುವ ನಿರ್ದೇಶನಗಳನ್ನು ಪಾಲಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.