ಕಡೂರಲ್ಲಿ ನಡೆದ ಯೋಗಾ ಚಾಂಪಿಯನ್‌ಷಿಪ್‌ನ ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರಿಗೆ ಅಭಿನಂದಿಸಲಾಯಿತು. ಜಿ.ಎನ್.ಕೃಷ್ಣಮೂರ್ತಿ, ಜಿಗಣೇಹಳ್ಳಿ ನೀಲಕಂಠಪ್ಪ, ಡಾ. ನಿರ್ಮಲ ರಮೇಶ್ ಇದ್ದರು. 
ಜಿಲ್ಲೆ

ಹಳೇ ಮದಗದ ಕೆರೆ ಕೆಳಭಾಗದ ಗ್ರಾಮಸ್ಥರಲ್ಲಿ ಆತಂಕ

ಕಡೂರು: ತಾಲೂಕಿನ ಹಳೇ ಮದಗದ ಕೆರೆ ಭಾಗದ ಕೆರೆಯು ಸಂಪೂರ್ಣ ತುಂಬಿ ಕೋಡಿ ನೀರಿನ ರಭಸಕ್ಕೆ ಸುಮಾರು 300 ಅಡಿ ಉದ್ದ ಭೂಮಿ ಕೊಚ್ಚಿ ಹೋಗಿದ್ದು. 70ಕ್ಕೂ ಅಡಿಗೂ ಹೆಚ್ಚು ಆಳದ ಗುಂಡಿಯಾಗಿ ಮಿನಿ ಜಲಪಾತವೇ ಸೃಷ್ಟಿಯಾಗಿರುವುದು ಕೆರೆ ಕೆಳಭಾಗದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.
ಕೆರೆ ಸುಮಾರು 210 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದಲ್ಲಿರುವ ಹಳೇ ಮದಗದ ಕೆರೆಯ ಕೋಡಿ ನೀರು ಮುಂದೆ ಆಶ್ರಿತ ಕೆರೆಗಳಿಗೆ ಹರಿಯುತ್ತಿದೆ. ಕೆಲ ದಿನಗಳ ಹಿಂದೆ ಮದಗದ ಕೆರೆ ತುಂಬಿದಾಗ ಈ ಹಳೇ ಮದಗದ ಕೆರೆ ತುಂಬಿ ಕೋಡಿ ಹರಿಯಲಾರಂಭಿಸಿತು. ಕೋಡಿ ನೀರಿನ ರಭಸಕ್ಕೆ ಮಣ್ಣು ಕುಸಿದು ಸುಮಾರು 70 ಅಡಿ ಆಳಕ್ಕೆ ನೀರು ಧುಮುಕುತ್ತಿದೆ. ನೀರಿನ ರಭಸಕ್ಕೆ ಎರಡೂ ಕಡೆ ದಡದ ಮಣ್ಣು ಕುಸಿದು ದಿನೇ ದಿನೇ ವಿಸ್ತಾರಗೊಂಡು ತಗ್ಗು ಪ್ರದೇಶದ ತೋಟಗಳೂ ಅಪಾಯದಲ್ಲಿವೆ. ಮಳೆ ಹೆಚ್ಚಾಗಿ ನೀರಿನ ಹರಿವು ಹೆಚ್ಚಿದರೆ ಕೋಡಿ ಹತ್ತಿರದ ತನಕ ಮಣ್ಣು ಕೊಚ್ಚಿಹೋಗಿ ಕೆರೆ ಏರಿಯೇ ಒಡೆಯುವ ಸ್ಥಿತಿ ನಿರ್ಮಾಣವಾಗಿದೆ.
ಕೆರೆ ಕೋಡಿಯ ಬಳಿ ಈ ಅವಾಂತರವಾದರೆ ಕೆರೆ ಏರಿ ಸಂಪೂರ್ಣ ಗಿಡಗಂಟೆಗಳಿಂದ ಆವೃತವಾಗಿ ಓಡಾಡಲು ಸಾಧ್ಯವಿಲ್ಲದಂತಾಗಿದೆ. ನೀರಿನ ಒಳ ಹರಿವು ಹೆಚ್ಚಾದರೆ ಏರಿ ಮೇಲೆ ನೀರು ಉಕ್ಕಿ ಕೆರೆಗೆ ಅಪಾಯವಾಗುವ ಸಂಭವವಿದೆ. ಎರಡು ದಿನಗಳ ಹಿಂದೆ ನೀರು ಏರಿ ಮೇಲೆ ಉಕ್ಕಿ ಹರಿದಾಗ ಗ್ರಾಮಸ್ಥರೇ ಮರಳು ಚೀಲ ಹಾಕಿದ್ದರು. ಇದೀಗ ಕೋಡಿಯಲ್ಲಿ ನೀರು ಹೆಚ್ಚು ಹೋಗುತ್ತಿರುವುದರಿಂದ ಕೆರೆ ನೀರು ಒಂದಿಷ್ಟು ತಹಬದಿಗೆ ಬಂದಿದೆ.
ಕೆರೆ ತೂಬಿನ ಬಳಿ ಹೋಗಲು ಜಾಗವಿಲ್ಲದಂತಾಗಿ ತೂಬು ಎತ್ತಲು ಸಾಧ್ಯವಿಲ್ಲದಂತಾಗಿದೆ. ತುರ್ತಾಗಿ ಕೆರೆ ತೂಬಿನ ಬಳಿ ಹೋಗಲು ಕಿರು ಸೇತುವೆ ನಿರ್ಮಾಣದ ಅವಶ್ಯಕವಿದೆ. ತೂಬು ತೆರೆಯಲು ಅವಕಾಶವಾದರೆ ಕೆರೆ ತುಂಬಿದಾಗ ನೀರು ಹೊರಬಿಟ್ಟು ಕೆರೆಯ ಒತ್ತಡ ಕಡಿಮೆ ಮಾಡಬಹುದಾಗಿದೆ. ಐದಾರು ವರ್ಷಗಳ ಹಿಂದೆ ಕೆರೆ ಏರಿ ಮೇಲಿನ ಗಿಡಗಳನ್ನು ತೆರವುಗೊಳಿಸಲಾಗಿತ್ತು. ಬಳಿಕ ಕಾಡಿನಂತೆ ಗಿಡಗಳು ಬೆಳೆದು ಏರಿ ಬಿರುಕು ಬಿಟ್ಟರೂ ಕಾಣದಂತಾಗಿದೆ. ಕೂಡಲೇ ಕೆರೆ ಏರಿ ಗಿಡಗಳನ್ನು ತೆರವುಗೊಳಿಸಬೇಕು ಎಂದು ಪಾವರ್ತಿ ನಗರದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.