ಜಿಲ್ಲೆ

ಮುಸುಕಿನ ಜೋಳಕ್ಕೆ ಹುಳು ಕಾಟ

Hassan

ಚನ್ನರಾಯಪಟ್ಟಣ: ತಾಲೂಕಿನಾದ್ಯಂತ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಮಳೆ ಆಶ್ರಯದ ಮುಸುಕಿನ ಜೋಳದ ಬೆಳೆ ಕೀಟಬಾಧೆಗೆ ಸಿಲುಕಿದ್ದು ಉತ್ತಮ ಫಸಲು ಹಾಗೂ ಹೆಚ್ಚು ಇಳುವರಿಯ ನಿರೀಕ್ಷೆಯಲ್ಲಿದ್ದ ರೈತಸಮೂಹ ಕಂಗಾಲಾಗಿದೆ.

ಮೇ ಅಂತ್ಯ ಹಾಗೂ ಜೂನ್ ತಿಂಗಳ ಪ್ರಾರಂಭದಲ್ಲಿ ಬಿತ್ತನೆಗೊಂಡ ಮುಸುಕಿನ ಜೋಳದ ಬೆಳೆ ಆರಂಭದಿಂದಲೂ ಮಳೆಯ ಕೊರತೆ ಇಲ್ಲದೆ ನಳನಳಿಸುತ್ತಿದೆ. ಆದರೆ, 55ರಿಂದ 60 ದಿನಗಳು ಕಳೆದಿರುವ ಬೆಳೆಯು ಫಸಲು ಹಿಡಿಯುವ ಹಂತ ಸಮೀಪಿಸಿರುವ ವೇಳೆ ಸೈನಿಕ ಹುಳುವಿನ ದಾಳಿಗೆ ಸಿಲುಕಿದೆ.

ತಾಲೂಕಿನಾದ್ಯಂತ ಈ ಬಾರಿ ಸುಮಾರು 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಕಂಡಿದೆ. ಮೇ ತಿಂಗಳಲ್ಲಿ ಬಿತ್ತನೆಯಾಗಿ ಪ್ರಾರಂಭದಲ್ಲಿ ತೀವ್ರ ಮಳೆ ಕೊರತೆ ಕಂಡಿತ್ತು. ಜೂನ್ ತಿಂಗಳಲ್ಲಿ ಬಿತ್ತಿರುವ ಜೋಳಕ್ಕೆ ಕೀಟಬಾಧೆ ಹೆಚ್ಚಾಗಿದ್ದು ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸದ್ಯ ಕೆಲವೆಡೆ ಬೆಳೆ ತೆನೆ ಮೂಡುವ ಹಂತ ತಲುಪಿದ್ದು, ಈ ಸಂದರ್ಭ ಸೈನಿಕ ಹುಳುಗಳು ಲಗ್ಗೆ ಇಟ್ಟಿವೆ. ಹಗಲಿನಲ್ಲಿ ಜೋಳದ ಸುಳಿ ಹಾಗೂ ಬುಡದ ಮಣ್ಣಿನ ಒಳಭಾಗದಲ್ಲಿ ಸೇರಿಕೊಳ್ಳುವ ಹುಳುಗಳು ರಾತ್ರಿ ವೇಳೆ ಹೊರಬಂದು ಗರಿಗಳನ್ನು ತಿನ್ನುತ್ತಿವೆ. ಅಲ್ಲದೆ, ಗರಿಗಳ ಮೇಲೆ ಹಿಕ್ಕೆ ವಿಸರ್ಜಿಸಿ ಜಾನುವಾರುಗಳ ಮೇವಿಗೂ ಬಳಕೆಯಾಗದ ಸ್ಥಿತಿ ತಲುಪಿದೆ. ಜೋಳದ ಗರಿ ಹಾಳಾಗಿರುವ ಪರಿಣಾಮ ಬೆಳವಣಿಗೆಯಲ್ಲಿ ಕುಂಠಿತ ಉಂಟಾಗಿದೆ. ಜೋಳದ ತೆನೆ ಬಂದರೂ ಫಸಲು ಕೈಹಿಡಿಯುವುದು ಅನುಮಾನ ಎಂದು ಜಂಬೂರು ಗ್ರಾಮದ ರೈತ ನಂಜೇಗೌಡ ತಿಳಿಸಿದರು.

ಮಳೆ ಹಾಗೂ ಶೀತಗಾಳಿ: ಇನ್ನು ಮಳೆ ಆಶ್ರಯ ಸೇರಿದಂತೆ ಕೊಳವೆ ಬಾವಿ ಹೊಂದಿರುವ ಕೃಷಿ ಜಮೀನಿನಲ್ಲಿ ಬಿತ್ತನೆ ಮಾಡಿರುವ ನೀರಾವರಿ ಆಶ್ರಯದ ಮುಸುಕಿನ ಜೋಳವು ನಳನಳಿಸುತ್ತಿದೆಯಾದರೂ ತೀವ್ರ ಕೀಟಬಾಧೆಗೆ ಸಿಲುಕಿ ನಲುಗಿ ಹೋಗುತ್ತಿದೆ. 15 ದಿನಗಳಿಂದ ಜಡಿಮಳೆಯೊಂದಿಗೆ ಅತಿಹೆಚ್ಚು ಶೀತಗಾಳಿಯು ಬೀಸುತ್ತಿದ್ದು, ವಾರದಿಂದ ಮೋಡಕವಿದ ವಾತಾವರಣದ ಪರಿಣಾಮ ಬೆಳೆಯಲ್ಲಿ ಕೀಟಬಾಧೆ ಇಮ್ಮಡಿಗೊಳ್ಳುತ್ತಿದೆ.

ರೈತರು ಈಗಾಗಲೇ ಹೋಬಳಿ ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ಔಷಧ ಅಂಗಡಿಗಳಿಗೆ ತೆರಳಿ ಲಭ್ಯವಿರುವ ಕೀಟನಾಶಕಗಳನ್ನು ತಂದು ಬೆಳೆಗೆ ಸಿಂಪಡಿಸಿದರೂ ಶೀತಗಾಳಿಯ ಕಾರಣದಿಂದ ಕೀಟಬಾಧೆ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನಲಾಗಿದೆ. ಕೆಲವರು ಕೀಣ ಕಾಣಿಸಿಕೊಂಡ ತಕ್ಷಣ ಔಷಧ ಸಿಂಪಡಿಸಿದರೆ ಇನ್ನು ಕೆಲವರು ಔಷಧ ಸಿಂಪಡಿಸದೇ ಇರುವುದರಿಂದ ಕೀಟಗಳು ನಿಯಂತ್ರಣಕ್ಕೆ ಬರದೆ ರೋಗ ಉಲ್ಬಣಿಸುತ್ತಿದೆ.

ಒಂದು ಎಕರೆ ಕೃಷಿ ಜಮೀನಿನಲ್ಲಿ ಜೋಳ ಬೆಳೆಯಬೇಕೆಂದರೆ ಬಿತ್ತನೆಯಿಂದ ಕಟಾವಿನವರೆಗೆ 10-12 ಸಾವಿರ ರೂ. ಖರ್ಚು ತಗಲುತ್ತದೆ. ಬೆಳೆ ಇತ್ತ ಜಾನುವಾರು ಮೇವಿಗೂ ಬಳಕೆಯಾಗದ ಸ್ಥಿತಿ ತಲುಪಿರುವುದರಿಂದ ರೈತರಿಗೆ ದಿಕ್ಕು ತೋಚದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗಲಿದ್ದು ಸರ್ಕಾರ ಇತ್ತ ಗಮನಹರಿಸಿ ಜೋಳ ಬೆಳೆಗಾರರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕೆಂಬ ಆಗ್ರಹ ಕೇಳಿಬಂದಿದೆ.

ಈ ಬಾರಿ ಬಿತ್ತನೆಯ ಆರಂಭದಿಂದಲೂ ಮಳೆಗೇನು ಕೊರತೆಯಿಲ್ಲ. ಆದರೆ ಉತ್ತಮ ಬೆಳವಣಿಗೆ ಕಂಡಿದ್ದ ಬೆಳೆಯಲ್ಲಿ ರೋಗ ಹಾಗೂ ಕೀಟಬಾಧೆ ಕಾಣಿಸಿಕೊಂಡಿದ್ದು ಬೆಳೆ ನೆಲ ಹಿಡಿಯುವ ಲಕ್ಷಣ ಕಂಡುಬರುತ್ತಿದೆ.
ಮಂಜಣ್ಣ ರೈತ, ದೇವಿಗೆರೆ ಗ್ರಾಮ

ತಾಲೂಕಿನಾದ್ಯಂತ ಮಳೆ ಹಾಗೂ ನೀರಾವರಿ ಆಶ್ರಯದಲ್ಲಿ ಸುಮಾರು 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿರುವ ಮುಸುಕಿನ ಜೋಳದ ಬೆಳೆಯು ಈ ಬಾರಿ ನಿರೀಕ್ಷೆ ಮೀರಿ ಬೆಳೆವಣಿಗೆ ಕಂಡಿದೆ. ಆದರೆ, ಕೀಟಬಾಧೆ ತೀವ್ರವಾಗಿ ಕಾಣಿಸಿಕೊಂಡಿದೆ. ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿ ಲಭ್ಯವಿರುವ ಕೀಟನಾಶಕವನ್ನು ಪಡೆದು ಅಧಿಕಾರಿಗಳ ಶಿಫಾರಸ್ಸು ಅನುಸರಿಸಿ ಬೆಳೆಗೆ ಕೀಟನಾಶಕ ಸಿಂಪಡಿಸಿದರೆ ಕೀಟಬಾಧೆಯಿಂದ ಮುಕ್ತಿ ಕಾಣಬಹುದು.
ರಶ್ಮಿ ಪ್ರಭಾರ ಸಹಾಯಕ ಕೃಷಿ ನಿರ್ದೇಶಕಿ, ಚನ್ನರಾಯಪಟ್ಟಣ