ಜಿಲ್ಲೆ

ಹಾಸ್ಟೆಲ್ ಆಹಾರ ಪದಾರ್ಥದಲ್ಲಿ ಹುಳು ಪತ್ತೆ

ಮುಂಡರಗಿ: ಪಟ್ಟಣದ ಬಿಸಿಎಂ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಊಟ ತಯಾರಿಸುವ ಆಹಾರ ಪದಾರ್ಥಗಳಲ್ಲಿ ಹುಳುಗಳು ಕಂಡುಬರುತ್ತಿವೆ. ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ತಾಲೂಕು ಘಟಕದಿಂದ ಬಿಸಿಎಂ ಇಲಾಖೆ ಅಧಿಕಾರಿ ಶಿವಯೋಗಿ ಕಲ್ಮಠ ಅವರಿಗೆ ಮನವಿ ಸಲ್ಲಿಸಲಾಯಿತು.

ಎಬಿವಿಪಿ ಜಿಲ್ಲಾ ಹಾಸ್ಟೆಲ್ ಪ್ರಮುಖ ಚಂದು ಪೂಜಾರ ಮಾತನಾಡಿ, ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ತಯಾರಿಸುವ ಆಹಾರ ಪದಾರ್ಥಗಳಲ್ಲಿ ಬಾಲಹುಳು ಸೇರಿ ಅನೇಕ ಹುಳುಗಳು ಕಂಡುಬರುತ್ತಿವೆ. ವಿದ್ಯಾರ್ಥಿನಿಯರು ಊಟ ಮಾಡಲಾಗದೆ ತೊಂದರೆಪಡುತ್ತಿದ್ದಾರೆ. ಟಾಯ್ಲಟ್ ಮತ್ತು ಬಾತ್​ರೂಮ್ ಸ್ವಚ್ಛ ಮಾಡಬೇಕೆಂದು ಅಲ್ಲಿಯ ವಾರ್ಡನ್ ವಿದ್ಯಾರ್ಥಿನಿಯರನ್ನು ಒತ್ತಾಯಿಸುತ್ತಿದ್ದಾರೆ. ಪ್ರಶ್ನೆ ಮಾಡಿದರೆ ಹಾಸ್ಟೆಲ್ ಬಿಟ್ಟು ಹೊರಹಾಕುತ್ತೇವೆ ಎಂದು ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದರು. ಎಬಿವಿಪಿ ತಾಲೂಕು ಸಂಚಾಲಕ ಮಹಾಂತಯ್ಯ ಹಿರೇಮಠ, ಭೂಮಿಕಾ ನಗರ, ಲಕ್ಷ್ಮೀ ನಗರ, ಅಕ್ಷಯ, ದೀಪಾ, ಕವನ ಇತರರಿದ್ದರು.