ಮಂಗಳೂರು: ಶಕ್ತಿ ಪದವಿ ಪೂರ್ವ ಕಾಲೇಜಿಗೆ ಜಗತ್ತಿನ 16ನೇ ವಯಸ್ಸಿಗೆ ಕಿರಿಯ ಮುಖ್ಯೋಪಾಧ್ಯಾಯ ಪದವಿ ಪಡೆದಿರುವ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಶಿಕ್ಷಕ ಬಾಬರ್ ಅಲಿ ಅವರು ಸೋಮವಾರ ಬೇಟಿ ನೀಡಿದರು.
ಶಿಕ್ಷಕ ಬಾಬರ್ ಅಲಿ ತಮ್ಮ 9ನೇ ವಯಸ್ಸಿಗೆ ಬೋಧನೆ ಪ್ರಾರಂಭಿಸಿದವರು. ಮುರ್ಷಿದಾಬಾದ್ ಜಿಲ್ಲೆಯು ಅತ್ಯಂತ ಹಿಂದುಳಿದ ಪ್ರದೇಶವಾಗಿರುವುದರಿಂದ ಆ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡುವ ಕೆಲಸವನ್ನು ಬಾಬರ್ ಅಲಿ ಅವರು ನಡೆಸಿರುತ್ತಾರೆ.
ಶಕ್ತಿ ಪದವಿ ಪೂರ್ವ ಕಾಲೇಜಿನ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಉದ್ದೇಶ ಆ ಪ್ರದೇಶದ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸುವುದಾಗಿದೆ. ನನಗೆ ಪ್ರೇರಣೆ ಪಶ್ಚಿಮ ಬಂಗಾಳದ ನನ್ನ ಜಿಲ್ಲೆಯ ಹತ್ತಿರವಿದ್ದ ರಾಮಕೃಷ್ಣ ಮಿಷನ್ ಸಂಸ್ಥೆ. ನಾನು ಸ್ವಾಮಿ ವಿವೇಕಾನಂದರ ಪುಸ್ತಕವನ್ನು ನಿರಂತರವಾಗಿ ಓದುವುದರ ಮೂಲಕ ಸಾಮಾಜಿಕ ಬದಲಾವಣೆಯನ್ನು ಮಾಡಬೇಕೆಂದು ಪಣತೊಟ್ಟಿರುವುದರಿಂದ ಈ ಸಾಧನೆಯನ್ನು ಮಾಡಲು ಸಾಧ್ಯವಾಯಿತು. 2009ರಲ್ಲಿ ಸಿಎನ್‌ಎನ್‌ಐಬಿಎನ್ ಚಾನೆಲ್ ರಿಯಲ್ ಹೀರೋಸ್ ಕಾರ್ಯಕ್ರಮದ ಮೂಲಕ ಬಹುಮಾನವನ್ನು ನೀಡಿತು. ಎನ್‌ಡಿಟಿವಿ ಇಂಡಿಯನ್ ಆಫ್ ದಿ ಇಯರ್ ಪ್ರಶಸ್ತಿಯನ್ನು ನೀಡಿತು. ಇತ್ತೀಚೆಗೆ ಫೋರ್ಬ್ಸ್ ಏಷ್ಯಾವು ಸಾಮಾಜಿಕ ಉದ್ಯಮಿಯಾಗಿ 30 ವರ್ಷದೊಳಗಿನ 30 ಹೆಸರು ವಾಸಿಯರ ಪಟ್ಟಿಯಲ್ಲಿ ಸೇರಿಸಿತು ಎಂದರು.
*ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
ನಾನು ಆನಂದ ಶಿಕ್ಷಾನಿಕೇತನ ಸಂಸ್ಥೆಯನ್ನು ಪ್ರಾರಂಭಿಸಿ ನನ್ನ ಊರಿನ ಸುಮಾರು 500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಾ ಬರುತ್ತಿದ್ದೇನೆ. ಈ ಎಲ್ಲಾ ಪ್ರಶಸ್ತಿಗಳು ಆ ವಿದ್ಯಾರ್ಥಿಗಳ ಸೇವೆಗೆ ಸಲ್ಲುತ್ತದೆ. ಜೀವನದಲ್ಲಿ ಸಾಮಾಜಿಕವಾದ ಸೇವೆಯನ್ನು ಮಾಡುವ ವಿಚಾರವನ್ನು ಸ್ವಾಮಿ ವಿವೇಕಾನಂದರ ವಿಚಾರದಿಂದ ಪಡೆದಿರುತ್ತೇನೆ. ಕೇಂದ್ರ ಸರ್ಕಾರದ ಸಿಬಿಎಸ್‌ಇ 10ನೇ ತರಗತಿಯ ಇಂಗ್ಲೀಷ್ ಪಠ್ಯ ಪುಸ್ತಕ ಮತ್ತು ಕರ್ನಾಟಕ ಸರ್ಕಾರದ ಪ್ರಥಮ ಪಿಯುಸಿ ಇಂಗ್ಲಿಷ್ ಪಠ್ಯ ಪುಸ್ತಕದಲ್ಲಿ ಹಾಗೂ ಪ್ರಪಂಚದ ಇತರ ಪಠ್ಯ ಪುಸ್ತಕದಲ್ಲಿ ನನ್ನ ಸಾಧನೆಯನ್ನು ಗುರುತಿಸಿ ಈ ಹಿಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಭಾಷಣಧಲ್ಲಿ ನನ್ನ ಕೆಲಸದ ಬಗ್ಗೆ ಉಲ್ಲೇಖಿಸಿರುತ್ತಾರೆ ಎಂದು ಬಾಬರ್ ಅಲಿ ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದವನ್ನು ನಡೆಸಲಾಯಿತು. ಸಂಸ್ಥೆಯ ಪ್ರಾಧಾನ ಸಲಹೆಗಾರ ರಮೇಶ್ ಕೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಹೆಚ್ ಇವರು ಬಾಬರ್ ಅಲಿ ಅವರನ್ನು ಗೌರವಿಸಿದರು.
ವಾಣಿಜ್ಯ ವಿಭಾಗದ ಮೆಲಿಸ್ಸಾ ಸ್ವಾಗತಿಸಿದರು. ಉಪನ್ಯಾಸಕಿ ಅಕ್ಷತ ಮತ್ತು ಶಕುಂತಲ ಉಪಸ್ಥಿತರಿದ್ದರು.