ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಜಾಗತೀಕರಣದಿಂದ ದೇಶದಲ್ಲಿ ಎಲ್ಲ್ಲ ಕ್ಷೇತ್ರಗಳು ಅಭಿವೃದ್ಧಿ ಹೊಂದುತ್ತಿರುವುದರಿಂದ ಬದಲಾಗುತ್ತಿರುವ ಆರ್ಥಿಕ ವ್ಯವಸ್ಥೆಗೆ ಹೊಂದಿಕೊಳ್ಳಲು ನಮ್ಮಲ್ಲಿರುವ ಮಾನವ ಸಂಪನ್ಮೂಲವನ್ನು ಕೌಶಲ ಭರಿತವಾಗಿಸಬೇಕು ಎಂದು ಕೌಶಲಾಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ಜಗನ್ನಾಥ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿಶ್ವ ಯುವ ಕೌಶಲ ದಿನಾಚರಣೆಯಲ್ಲಿ ಮಾತನಾಡಿದರು.
ದೇಶದಲ್ಲಿ ಯುವ ಶಕ್ತಿಯ ಸಂಖ್ಯೆ ಅಧಿಕವಾಗಿದೆ. ಗ್ರಾಮಾಂತರ ಜಿಲ್ಲೆಗೆ ವಿದೇಶಿ ಕಂಪನಿಗಳು ಕಾಲಿಡುತ್ತಿದ್ದು, ಸದುಪಯೋಗ ಮಾಡಿಕೊಳ್ಳಬೇಕು. ಉತ್ತಮ ಜೀವನೋಪಾಯಕ್ಕೆ ಕೌಶಲ ಅತಿ ಮುಖ್ಯ. ಯುವಪೀಳಿಗೆಗೆ ಆತ್ಮವಿಶ್ವಾಸ ಇರಬೇಕು. ಸಿಗುವ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು.ಸಮಾಜದಲ್ಲಿ ಸಂವಹನ ನಡೆಸಲು ಕೌಶಲ ಬೇಕು ಎಂದರು.
ಪ್ರಾಂಶುಪಾಲ ಡಾ. ಸದಾಶಿವರಾಮಚಂದ್ರ ಮಾತನಾಡಿ, ಪ್ರಪಂಚದ ಜತೆಗೆ ನಮ್ಮ ಸುತ್ತಮುತ್ತ ನಡೆಯುವ ಪ್ರತಿಯೊಂದು ಆಗುಹೋಗುಗಳನ್ನು ತಿಳಿದುಕೊಂಡಿರಬೇಕು. ಸ್ಪರ್ಧೆಯನ್ನು ಎದುರಿಸಲು ಕೌಶಲವನ್ನು ತಳಪಾಯದಿಂದ ಅರಿತುಕೊಳ್ಳಬೇಕು. ಕೌಶಲದಿಂದ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯ ಕಾಣಬಹುದು ಎಂದು ತಿಳಿಸಿದರು.
ಕೌಶಲಾಭಿವೃದ್ಧಿ ಇಲಾಖೆ ಮಹಾಂತೇಶ್ ಇದ್ದರು.