ವಿಜಯವಾಣಿ ಸುದ್ದಿಜಾಲ ಉಡುಪಿ
ಕ್ಷಯ ರೋಗವು ಅಂಟುರೋಗವಾಗಿದ್ದು, ಕೇಂದ್ರ ಸರ್ಕಾರವು 2030ರ ಒಳಗಾಗಿ ದೇಶದಲ್ಲಿ ಈ ಕಾಯಿಲೆಯನ್ನು ಸಂಪೂರ್ಣ ನಿಯಂತ್ರಿಸುವ ಗುರಿ ಹೊಂದಿದೆ. ಆ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಆರೋಗ್ಯ ಇಲಾಖೆಯೊಂದಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್. ಕರೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಕ್ಷಯರೋಗ ನಿಮೂರ್ಲನಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಮಾ.24ರಂದು ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಶ್ವ ಕ್ಷಯ ರೋಗ ನಿಯಂತ್ರಣ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಎಚ್.ನಾಗಭೂಷಣ ಉಡುಪ ಉಪಸ್ಥಿತರಿದ್ದರು.
ಜಿಲ್ಲೆಯ ಎಲ್ಲ ತಾಲೂಕಿನ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒಗಳು, ತಾಲೂಕು ಹಾಗೂ ಇಲಾಖೆಯ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಆಲಂದೂರು ಮಂಜುನಾಥ ಎಸ್. ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಸಂದೀಪ ವಂದಿಸಿದರು.
ಜಿಲ್ಲಾ ಕ್ಷಯರೋಗ ನಿಮೂರ್ಲನಾಧಿಕಾರಿ ಡಾ. ಚಿದಾನಂದ ಸಂಜು ಪ್ರಾಸ್ತಾವಿಕವಾಗಿ ಮಾತನಾಡಿ, 2015ಕ್ಕೆ ಹೋಲಿಸಿದ್ದಲ್ಲಿ ಉಡುಪಿ ಜಿಲ್ಲೆಯಲ್ಲಿ 2022ರಲ್ಲಿ ಶೇ.40-60ರಷ್ಟು ಟಿಬಿ ಪ್ರಕರಣ ಕಡಿಮೆ ಮಾಡಲಾಗಿದೆ. ಈ ಸಾಧನೆಗಾಗಿ ನಮ್ಮ ಜಿಲ್ಲೆಗೆ ರಾಷ್ಟ್ರಮಟ್ಟದಲ್ಲಿ ಬೆಳ್ಳಿ ಪದಕ ಲಭಿಸಿದೆ. ರೋಗಿಗಳನ್ನು ಪತ್ತೆಹಚ್ಚಲು ನ್ಯಾಟ್ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಸಾಲಿನಲ್ಲಿಯೂ ಶೇ.9ರಷ್ಟು ಟಿಬಿ ಪ್ರಕರಣ ಕಡಿಮೆ ಮಾಡಲಾಗಿದೆ. ಸೋಂಕಿತರ ಸಂಖ್ಯೆ ಇನ್ನೂ ಇಳಿಕೆ ಮಾಡಲು ಆರೋಗ್ಯ ಇಲಾಖೆಯ ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎಂದರು.
ಗ್ರಾಮದ ಜನರ ಆರೋಗ್ಯ ತಪಾಸಣೆ, ಗುಣಮುಖವಾಗಿರುವ ಅಂಕಿ-ಅಂಶ ಸೇರಿದಂತೆ ಇನ್ನಿತರ ಮಾನದಂಡ ಅನುಸರಿಸಿದ್ದ ಜಿಲ್ಲೆಯ 26 ಗ್ರಾಪಂಗಳನ್ನು ಕಳೆದ ಸಾಲಿನಲ್ಲಿ ಕ್ಷಯಮುಕ್ತ ಎಂದು ಆಯ್ಕೆ ಮಾಡಲಾಗಿತ್ತು. ಅವುಗಳಲ್ಲಿ ಪ್ರಸಕ್ತ ಸಾಲಿನಲ್ಲಿ 23 ಗ್ರಾಪಂಗಳಿಗೆ ರಜತ ಪದಕ ಹಾಗೂ ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಆಯ್ಕೆ ಮಾಡಲಾದ 39 ಗ್ರಾಪಂಗಳಿಗೆ ಕಂಚಿನ ಪದಕದೊಂದಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಕ್ಷಯ ನಿರ್ಮೂಲನಾ ಕಾರ್ಯಕ್ರಮದಲ್ಲಿ ವಿಶೇಷ ಸೇವೆ ಸಲ್ಲಿಸಿದ ಇಲಾಖೆಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಉಡುಪಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ನೂರು ದಿನಗಳ ಅಭಿಯಾನದಲ್ಲಿ ಕ್ಷಯ ರೋಗಿಗಳನ್ನು ಗುರುತಿಸಿ, ಗುಣಮಟ್ಟದ ಚಿಕಿತ್ಸೆ ನೀಡಿ ಅವರು ಸಂಪೂರ್ಣ ಗುಣಮುಖರಾಗುವವರೆಗೂ ನಿಗಾ ವಹಿಸಲಾಗುವುದು. ಗ್ರಾಪಂ ಮಟ್ಟದಿಂದಲೇ ಜನರ ಆರೋಗ್ಯ ರಕ್ಷಣೆಯ ಕಾರ್ಯವಾಗಬೇಕು. ಅಧಿಕಾರಿಗಳು ಗ್ರಾಮಸಭೆಗಳಲ್ಲಿ ಸಾಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸಬೇಕು. | ಪ್ರತೀಕ ಬಾಯಲ್. ಜಿಪಂ ಸಿಇಒ