ಯುನೈಟೆಡ್ ಆಸ್ಪತ್ರೆಯಲ್ಲಿ ಟ್ರಾಮಾ ದಿನಾಚರಣೆ / ನಿಮಿಷಕ್ಕೆ ಮೂರು ಜನ ವಾಹನ ಅಪಘಾತ ದಿಂದ ಮೃತಪಡುತ್ತಿದ್ದಾರೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಭಾರತದಲ್ಲಿ ವಾರ್ಷಿಕ ೧.೬ ಲಕ್ಷ ಜನರು, ನಿತ್ಯ ೪೦೦ ಜನ, ನಿಮಿಷಕ್ಕೆ ಮೂರು ಜನ ವಾಹನ ಅಪಘಾತದಿಂದ ಮೃತಪಡುತ್ತಿದ್ದಾರೆ. ಸಾವು ತಡೆಗೆ ಚಾಲಕರ ನಿಯಮ ಪಾಲನೆ ಮತ್ತು ಗುಣಮಟ್ಟದ ತುರ್ತು ವೈದ್ಯಕೀಯ ಸೇವೆ ಅಗತ್ಯ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಹೇಳಿದರು.
ನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಟ್ರಾಮಾ ದಿನ ಆಚರಣೆಯಲ್ಲಿ ಮಾತನಾಡಿ, ಉತ್ತಮ ರಸ್ತೆ, ಜನಸಂಖ್ಯೆ, ವಾಹನಗಳ ಹೆಚ್ಚಳ ಅಪಘಾತಕ್ಕೆ ಕಾರಣವಲ್ಲ. ಅತಿವೇಗದಿಂದ ಶೇ.೭೦ ಅಪಘಾತಗಳು ಸಂಭವಿಸುತ್ತಿವೆ. ಸಂಚಾರ ನಿಯಮಗಳನ್ನು ನಿರಂತರವಾಗಿ ಉಲ್ಲಂಘನೆ ನಡೆಯುತ್ತಿದೆ. ಹೆಲ್ಮೇಟ್ ಮರೆತ್ತಿದ್ದು, ಸೀಟ್ ಬೆಲ್ಟ್ ಇಲ್ಲದೆ ವಾಹನ ಚಾಲನೆ ಮಾಡಿದ್ದರಿಂದ ಸಮಸ್ಯೆ ಉಲ್ಭಣವಾಗುತ್ತಿದೆ ಎಂದರು.
ಅಪಘಾತ, ಸಾವುಗಳ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಎಲ್ಲರೂ ಜವಾಬ್ದಾರಿಯಿಂದ ನಿಯಮ ಪಾಲಿಸಿದಾಗ ಮಾತ್ರ ಉತ್ತಮ ಸಾವು ತಡೆ ಸಾಧ್ಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಮಾತನಾಡಿ, ಅಪಘಾತಗಳಲ್ಲಿ ನಿತ್ಯ ಹಲವರಿಗೆ ಗಾಯಗಳಾಗುತ್ತಿದ್ದು, ತಕ್ಷಣ ಚಿಕಿತ್ಸೆ ನೀಡಿದರೆ ಜೀವ ಉಳಿಸಬಹುದು. ಜನರು, ಪೊಲೀಸ್, ಆಂಬುಲೆನ್ಸ್, ಆಸ್ಪತ್ರೆಯವರು ಒಟ್ಟಾಗಿ ಕೆಲಸ ಮಾಡಿದರೆ ಜೀವ ಉಳಿಸಬಹುದು. ಗ್ರಾಮೀಣ ಭಾಗದಲ್ಲಿ ಅಪಘಾತಗಳಾದರೆ ಭಾರಿ ವೇಗದ ಸ್ಪಂದನೆ ಅಗತ್ಯ ಎಂದರು.
ಗಾಯಾಳುಗಳಿಗೆ ಸ್ಥಳಾಂತರ, ಆಸ್ಪತ್ರೆ ದಾಖಲಿಸುವ ವೇಳೆಯೂ ಕ್ರಮಗಳು ಇವೆ. ಕ್ರಮಗಳು ಅನುಸರಿಸದಿದ್ದರೆ ಗಾಯ ಇನ್ನಷ್ಟು ಹೆಚ್ಚಾಗಿ ರೋಗಿಗೆ ಹಾನಿ ಸಾಧ್ಯತೆ ಇರುತ್ತದೆ. ಆದ್ದರಿಂದ ರೋಗಿಯನ್ನು ವಾಹನದಲ್ಲಿ ಕೂಡಿಸುವ ವಿಧಾನ ಸೇರಿ ಎಲ್ಲವನ್ನು ಕ್ರಮಬದ್ಧವಾಗಿ ಪೊಲೀಸ್, ಆಂಬುಲೆನ್ಸ್ ಸಿಬ್ಬಂದಿ ಮತ್ತು ಸಾರ್ವಜನಿಕರು ಅರಿಯಬೇಕು ಎಂದರು.
ಯುನೈಟೆಡ್ ಆಸ್ಪತ್ರೆಯ ಮುಖ್ಯಸ್ಥ ಡಾ.ವಿಕ್ರಂ ಸಿದ್ದಾರಡ್ಡಿ ಮಾತನಾಡಿ, ದೇಶದಲ್ಲಿ ೪.೫ ಲಕ್ಷ ರಸ್ತೆ ಅಪಘಾತಗಳಾಗುತ್ತಿದ್ದು, ಅತಿ ವೇಗ, ಸಂಚಾರ ನಿಯಮ ಉಲ್ಲಂಘನೆ ಇದಕ್ಕೆ ಕಾರಣ. ಅತಿ ದೊಡ್ಡ ಆರೋಗ್ಯ ಗಂಡಾAತರವಾಗಿ ಅಪಘಾತ ಮಾರ್ಪಟ್ಟಿದೆ. ರಸ್ತೆ, ವಾಹನಗಳು ಹೆಚ್ಚಾದಂತೆ ಅಪಘಾತಗಳು ಹೆಚ್ಚಾಗಿವೆ ಎಂದರು.
ಡಾ.ವೀಣಾ ವಿಕ್ರಂ ಸಿದ್ದಾರಡ್ಡಿ, ರಾಜು ಕುಲ್ಕರ್ಣಿ, ಡಾ.ರಾಕೇಶ ಬೇಂದ್ರೆ, ಎಸಿಪಿ ಭೂತೆಗೌಡ ಇತರರಿದ್ದರು.
ಕಠಿಣ ಕ್ರಮ ಕೈಗೊಳ್ಳಲಾಗುವುದು.
ನಗರದಲ್ಲಿ ಸಂಚಾರ ನಿಯಮ ಪಾಲನೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮೊದಲ ಹಂತದಲ್ಲಿ ಜಾಗೃತಿ ಮೂಡಿಸಲಾಗುವುದು. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು. ನಿಯಮಗಳು ಇರುವುದು ಪಾಲಿಸಲು ಹೊರತು, ದಂಡ ವಿಧಿಸಲು ಅಲ್ಲ. ಅಪಘಾತವಾದಾಗ ಜನರು ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆತರಬೇಕು. ನೆರವಿಗೆ ಬಂದವರನ್ನು ಸಾಕ್ಷಿ ಮಾಡುವುದಿಲ್ಲ.
| ಡಾ.ಶರಣಪ್ಪ ಎಸ್.ಡಿ
ನಗರ ಪೊಲೀಸ್ ಆಯುಕ್ತ
ಸುವರ್ಣ ಘಳಿಗೆ, ಯುನೈಟೆಡ್ ಸೇವೆ
ಅಪಘಾತದ ವೇಳೆ ಸುವರ್ಣ ಗಳಿಗೆಯಲ್ಲಿ ಉತ್ತಮ ಚಿಕಿತ್ಸೆ ನೀಡುವಲ್ಲಿ ಯುನೈಟೆಡ್ ಆಸ್ಪತ್ರೆ ವೈದ್ಯಕೀಯ ತಂಡ ಉತ್ತಮ ಸೇವೆ ಸಲ್ಲಿಸುತ್ತಿದೆ. ಅ.೧೬ರಂದು ರಾತ್ರಿ ಸಂಭವಿಸಿದ ಅಪಘಾತದ ಗಾಯಾಳುಗಳನ್ನು ತಂದಾಗ ಆಸ್ಪತ್ರೆ ವೈದ್ಯರ ತಂಡ ಉತ್ತಮ ಸ್ಪಂದನೆ ನೀಡಿದೆ ಎಂದು ಡಾ.ಶರಣಪ್ಪ ಎಸ್.ಡಿ. ಶ್ಲಾಘಿಸಿದರು. ಅಪಘಾತದ ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು. ಆಸ್ಪತ್ರೆಗೆ ದಾಖಲಿಸಿದವರನ್ನು ಸಾಕ್ಷಿಯನ್ನಾಗಿ ಮಾಡುವುದಿಲ್ಲ. ಪೊಲೀಸರಿಂದ ತೊಂದರೆ ಆಗಲ್ಲ. ಜೀವ ಉಳಿಸುವುದಕ್ಕೆ ಸಾಥ್ ನೀಡಬೇಕು ಎಂದು ಸಲಹೆ ನೀಡಿದರು.
ಗಾಯಾಳುವಿಗೆ ತುರ್ತು, ಗುಣಮಟ್ಟದ ಚಿಕಿತ್ಸೆ
ಸಮಾಜದ ಪ್ರತಿಯೊಂದು ಕ್ಷೇತ್ರದವರಲ್ಲಿ ಅಪಘಾತದ ಸಂದರ್ಭದಲ್ಲಿ ಎದುರಿಸಬೇಕಾದ ಕ್ರಮಗಳು, ಸ್ಪಂದನೆ ಅವಶ್ಯವಾಗಿದೆ. ಗಾಯಾಳುಗಳಿಗೆ ಸ್ಪಂದಿಸುವ, ಸಂಚಾರ ನಿಯಮದ ಜಾಗೃತಿ ಮೂಡಿಸಿದರೆ ಅಪಘಾತಗಳನ್ನು ನಿಯಂತ್ರಿಸಬಹುದು. ಅಲ್ಲದೆ ಗಾಯಾಳುವಿಗೆ ತುರ್ತು, ಗುಣಮಟ್ಟದ ಚಿಕಿತ್ಸೆಯೂ ಅವಶ್ಯವಾಗಿದೆ. ತುರ್ತು ಚಿಕಿತ್ಸೆಗೆ ಯುನೈಟೆಡ್‌ನಿಂದ ತಕ್ಷಣ ಸ್ಪಂದಿಸಲು ಎಲ್ಲ ಅತ್ಯುನ್ನತ ಚಿಕಿತ್ಸೆ ಸೇವಾ ವ್ಯವಸ್ಥೆ ಹೊಂದಲಾಗಿದೆ.
| ಡಾ.ವಿಕ್ರಂ ಸಿದ್ದಾರಡ್ಡಿ
ಮುಖ್ಯಸ್ಥ, ಯುನೈಟೆಡ್ ಆಸ್ಪತ್ರೆ