ವಿಜಯಪುರದ ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಧಾರವಾಡದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಉದ್ಘಾಟಿಸಿದರು. ಮಲ್ಲಿಕಾರ್ಜುನ ಭಜಂತ್ರಿ, ಮೇಯರ್ ಮಹೇಜಬಿನ್ ಹೊರ್ತಿ, ಉಪ ಮೇಯರ್ ದಿನೇಶ ಹಳ್ಳಿ ಮತ್ತಿತರರಿದ್ದಾರೆ.  
ಜಿಲ್ಲೆ

ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

ವಿಜಯಪುರ: ಗೋಳಗುಮ್ಮಟ ವಿಶ್ವದ ಆಕರ್ಷಣೀಯ ಪ್ರವಾಸಿ ತಾಣಗಳಲ್ಲೊಂದು. ಇಂಥ ಸ್ಥಳದಲ್ಲಿ ವಿಶ್ವ ಪ್ರವಾಸೋದ್ಯಮ ದಿನ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಧಾರವಾಡದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಹೇಳಿದರು.

ನಗರದ ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ಸಿಕ್ಯಾಬ್ ಇನ್ಸಿಟ್ಯೂಷನ್ ಹಾಗೂ ಹೋಟೆಲ್ ಅಸೋಸಿಯೇಶನ್ ಸಹಯೋಗದಲ್ಲಿ ‘ಪ್ರವಾಸೋದ್ಯಮ ಮತ್ತು ಶಾಂತಿ’ ಘೋಷವಾಕ್ಯದಡಿ ಶುಕ್ರವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಇಲ್ಲಿನ ಪ್ರವಾಸಿ ತಾಣಗಳು ದೇಶ, ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇಲ್ಲಿನ ಸ್ಮಾರಕಗಳ ರಕ್ಷಣೆಯ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.

ಇತಿಹಾಸದ ಘಟನೆ ಹಾಗೂ ಸ್ಮಾರಕಗಳ ಬಗ್ಗೆ ಅಧ್ಯಯನ ಮಾಡಿ ಅವುಗಳ ಮಹ್ವತವನ್ನು ಅರಿಯಬೇಕು. ನಮ್ಮ ರಾಜ್ಯದಲ್ಲಿ ಹಲವಾರು ಸ್ಮಾರಕ, ಪ್ರವಾಸಿ ಸ್ಥಳಗಳ ಮಹತ್ವ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಉಪನ್ಯಾಸ ನೀಡಿದ ಮುಸ್ತಾಕ್ ಮಹ್ಮದ್ ಇನಾಮದಾರ, ಪ್ರವಾಸೋದ್ಯಮದಿಂದ ಉದ್ಯೋಗ ಸೃಷ್ಟಿಯಾಗುವುದಲ್ಲದೆ, ಸ್ಥಳೀಯ ಕರಕುಶಲ ಕಲೆ, ಸಾಂಸ್ಕೃತಿಕ ಪರಿಚಯ ಉಂಟಾಗುತ್ತದೆ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ವರ್ಷದ ಉತ್ತಮ ಪ್ರವಾಸಿ ಮಾರ್ಗದರ್ಶಕ ಎಂದು ಜಹಾಂಗೀರ್ ಅವರನ್ನು, ಪ್ರವಾಸಿ ಮಿತ್ರ ಎಂದು ಡಿ.ಜೆ. ಪತ್ತಾರ ಅವರನ್ನು ಹಾಗೂ ಚಿತ್ರಕಲಾ ಸ್ಪರ್ಧೆ, ಭಾಷಣ ಸ್ಪರ್ಧೆ, ರಸಪ್ರಶ್ನೆ, ಸ್ಥಬ್ಧಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರ, ಫೋಟೋಗ್ರಫಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಲಾಯಿತು.

ವಿಜಯಪುರದ ಐತಿಹಾಸಿಕ ಪ್ರವಾಸಿ ತಾಣಗಳ ಭಾವಚಿತ್ರಗಳ ಪ್ರದರ್ಶನ ಹಾಗೂ ಪ್ರವಾಸಿ ತಾಣಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೆಳಕು ಚೆಲ್ಲುತ್ತಿರುವ ಕಂಟೆಂಟ್ ಕ್ರೀಯೆಟರ್ಸ್‌ ಅವರನ್ನು ಸನ್ಮಾನಿಸಲಾಯಿತು.
ಮೇಯರ್ ಮಹೇಜಬಿನ್ ಹೊರ್ತಿ, ಉಪ ಮೇಯರ್ ದಿನೇಶ ಹಳ್ಳಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ವಿಜಯಕುಮಾರ ದೋಣಿ, ಮಹೇಶ್ ಕ್ಯಾತನೂರ, ಆರತಿ ಪಾಟೀಲ, ಡಿ.ಪಿ. ಜಾಧವ ಮತ್ತಿತರರಿದ್ದರು.
ಎಎಸ್‌ಐ ಸಿಬ್ಬಂದಿ, ಟೂರಿಸ್ಟ್ ಗೈಡ್, ಬಂಗಾರಮ್ಮ ಸಜ್ಜನ ಕಾಲೇಜು, ಸಿಕ್ಯಾಬ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.