ಜಗಳೂರು: ತಾಲೂಕನ್ನು ಹಸಿರು ಮತ್ತು ಸ್ವಚ್ಛ, ಸುಂದರವಾಗಿ ರೂಪಿಸಲು ಎಲ್ಲರೂ ಕಂಕಣಬದ್ಧರಾಗಬೇಕು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ಇಲ್ಲಿನ ಕನ್ನಡ ಮತ್ತು ಸಂಸ್ಕೃತಿ ಭವನದಲ್ಲಿ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ನಗರಾಭಿವೃದ್ಧಿ ಕೋಶ ದಾವಣಗೆರೆ, ಪಪಂ, ಮಾಲಿನ್ಯ ನಿಯಂತ್ರಣ ಮಂಡಳಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಗುರುವಾರ ಸ್ವಚ್ಛತೆಯೇ ಸೇವೆ ಅಭಿಯಾನದಡಿ ಹಮ್ಮಿಕೊಂಡಿದ್ದ ಸ್ವಚ್ಛತಾ ಸಮ್ಮೇಳನ ಮತ್ತು ಶ್ರಮದಾನ ಹಾಗೂ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸ್ವಚ್ಛತೆಯೆಡೆಗೆ ನಮ್ಮ ಹೆಜ್ಜೆ ಎಂಬ ಧ್ಯೇಯದೊಂದಿಗೆ ಸ್ವಚ್ಛ ಪರಿಸರದ ನಿರ್ಮಾಣಕ್ಕೆ ಎಲ್ಲರೂ ದೃಢಸಂಕಲ್ಪ ಮಾಡಿದರೆ ಇಡೀ ಭಾರತವನ್ನೇ ಶುಚಿಗೊಳಿಸಲು ಸಾಧ್ಯ ಎಂದರು.
ಏಷ್ಯಾದಲ್ಲಿಯೇ ಅಪರೂಪದ ಕೊಂಡುಕುರಿ ಜಗಳೂರು ತಾಲೂಕಿನಲ್ಲಿರುವುದು ವಿಶೇಷ. ರಂಗಯ್ಯನದುರ್ಗ ಅರಣ್ಯ ಪ್ರದೇಶ ಕುರುಚಲಿಂದ ಕೂಡಿದ್ದು ನೋಡಲು ಸುಂದರವಾಗಿದೆ. ಈ ಸ್ಥಳವನ್ನು ನೋಡಲು ಅನೇಕರು ಪ್ರವಾಸ ಬರುತ್ತಿದ್ದಾರೆ. ಅಂತಹ ಪ್ರಾಣಿಯನ್ನು ರಕ್ಷಿಸಿ ಪ್ರವಾಸ ಕೇಂದ್ರವನ್ನಾಗಿ ಅಭಿವೃದ್ಧ್ದಿಪಡಿಸಲು ಒತ್ತು ನೀಡಲಾಗುವುದು ಎಂದರು.
ಜಿಲ್ಲಾ ವಾಯು ಮಾಲಿನ್ಯ ನಿಯಂತ್ರಣಾಧಿಕಾರಿ ಲಕ್ಷ್ಮೀಕಾಂತ್ ಮಾತನಾಡಿ, ಭೂಮಿಯ ಮೇಲೆ ನೀರು ಹೆಚ್ಚು ಮುಖ್ಯವಾಗಿದೆ. ಜೀವನ ನಡೆಯುವುದು ನೀರಿನಿಂದ, ನಾಶವು ನೀರಿನಿಂದ. ಹಾಗಾಗಿ, ನೀರಿನ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಎಸ್ಸಿ, ಎಸ್ಟಿ ಜನಜಾಗೃತಿ ಸಮಿತಿ ಪಿ.ಎಸ್. ಅರವಿಂದ್, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಕಸಾಪ ತಾಲೂಕು ಅಧ್ಯಕ್ಷೆ ಸುಜಾತಾ, ಗೀತಾಮಂಜು, ಗೌರಮ್ಮ, ಪಪಂ ಸದಸ್ಯ ರಮೇಶ್, ಆರೋಗ್ಯ ನಿರೀಕ್ಷಕ ಕಿಫಾಯಿತ್, ಮುಖಂಡರಾದ ಕುರಿ ಜಯಣ್ಣ, ಅಹಮದ್ ಅಲಿ, ಪಲ್ಲಾಗಟ್ಟೆ ಶೇಖರಪ್ಪ ಮತ್ತಿತರರಿದ್ದರು.