ಜಿಲ್ಲೆ

ರಂಗನಾಟಕಗಳು ಪ್ರಭುತ್ವವನ್ನು ಎಚ್ಚರಗೊಳಿಸುವ ಮಾಧ್ಯಮ

ವಿಜಯವಾಣಿ ಸುದ್ದಿಜಾಲ ಧಾರವಾಡ

ಬೀದಿ ನಾಟಕಗಳು ಜನಜಾಗೃತಿ ಮೂಡಿಸಲು ಸರ್ವಕಾಲಕ್ಕೂ ಪ್ರಮುಖ ಪಾತ್ರ ವಹಿಸುತ್ತವೆ. 70ರ ದಶಕದಲ್ಲಿ ಕಲೆಗಾಗಿ ಕಲೆ ಅಲ್ಲ, ಬದುಕಿಗಾಗಿ ಕಲೆ ಎಂಬ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಬೀದಿ ನಾಟಕಗಳು, ಜಾಥಾಗಳು, ರಂಗನಾಟಕಗಳು ಕಾಲಕಾಲಕ್ಕೆ ಪ್ರಭುತ್ವವನ್ನು ಎಚ್ಚರಗೊಳಿಸುತ್ತ ಬಂದಿವೆ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿಯು ನಗರದ ಸಮುದಾಯ ಸಂಘಟನೆಯ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬೀದಿ ನಾಟಕ ಪ್ರದರ್ಶನ, ಪ್ರಾತ್ಯಕ್ಷಿಕೆ, ವಿಶ್ವ ರಂಗಭೂಮಿ ಸಂದೇಶ, ರಂಗ ಗೀತೆಗಳು, ರಂಗ ಗೌರವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೀದಿ ನಾಟಕ ತರಬೇತಿಗೆ ಹಿರಿಯ ಹೋರಾಟಗಾರ ಬಿ.ಎಸ್. ಸೊಪ್ಪಿನ ಚಾಲನೆ ನೀಡಿದರು. ಜೋಸೆಫ್ ಮಲ್ಲಾಡಿ ನಿರ್ದೇಶನದ `ನಾವು ದೊಡ್ಡ ಮಂದಿ' ಬೀದಿ ನಾಟಕ ಪ್ರದರ್ಶನಗೊಂಡಿತು.

ಮೈಸೂರು ಆಕಾಶವಾಣಿ ಹಿರಿಯ ಉದ್ಘೋಷಕ ಪ್ರಭುಸ್ವಾಮಿ ಮಳಿಮಠ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿದರು. ಸಮುದಾಯ ಅಧ್ಯಕ್ಷ ಬಿ.ಐ. ಈಳಿಗೇರ ಅಧ್ಯಕ್ಷತೆ ವಹಿಸಿದ್ದರು.

ರಂಗಕರ್ಮಿಗಳಾದ ನಿಂಗಣ್ಣ ಕುಂಟಿ, ಡಾ. ಶಶಿಧರ ನರೇಂದ್ರ, ಸಿದ್ದರಾಮ ಹಿಪ್ಪರಗಿ, ಭೀಮಸೇನ ಕಾಗಿ, ಪ್ರಮೋದ್ ನಿಂಬಾಳ್ಕರ, ಸುನೀಲ ಪತ್ರಿ, ಸುನಂದಾ ನಿಂಬನಗೌಡ, ಕಾವ್ಯ ರಾಘವೇಂದ್ರ ರಾವ್, ಬಸವರಾಜ ಮಲ್ಲಾಪೂರಮಠ ಅವರಿಗೆ ರಂಗಗೌರವ ಸಲ್ಲಿಸಲಾಯಿತು.

ನಾಟಕ ಅಕಾಡೆಮಿ ಸದಸ್ಯೆ ಗಾಯತ್ರಿ ಹಡಪದ, ಡಾ. ಶಿವಾನಂದ ಶೆಟ್ಟರ, ಜೋಸೆಫ್ ಮಲ್ಲಾಡಿ, ಡಾ. ಪ್ರತಾಪ ಬಹುರೂಪಿ, ಗಂಗಾಧರ ಗಾಡದ, ಎನ್.ಎಂ. ಪಾಟೀಲ, ಮಹೇಶ ಪತ್ತಾರ, ಭೀಮನಗೌಡ ಕಟಾವಿ, ವೀರಣ್ಣ ಹೊಸಮನಿ, ಅನ್ನಪೂರ್ಣ ಮಡಿವಾಳರ, ಇತರರಿದ್ದರು.