ಜಿಲ್ಲೆ

ಜಾಗೃತಿಯಿಂದ ಪಾರ್ಶ್ವವಾಯು ನಿಯಂತ್ರಣ ಸಾಧ್ಯ

ಪ್ರಶಾಂತ ಜಿ. ಭಾಗ್ವತ

ಡಾ.ಲತಾ ನಾಯಕ್​ ಅನಿಸಿಕೆ

ವರ್ಲ್ಡ್​ ಪ್ಯಾರಾಲಿಸೀಸ್​ ಡೇ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಪಾರ್ಶ್ವವಾಯು ಕಾಯಿಲೆಯಿಂದ ದಿಢೀರ್​ ಸಾವು ಬರದಿದ್ದರೂ ಸಹ ಈ ರೋಗಕ್ಕೆ ತುತ್ತಾದವರು ಜೀವನ ಪರ್ಯಂತ ಕಷ್ಟದಾಯಕ ಬದುಕು ಅನುಭವಿಸಬೇಕಾಗುತ್ತದೆ. ಹೀಗಾಗಿ ಪಾರ್ಶ್ವವಾಯು ಕಾಯಿಲೆಯ ಹತೋಟಿ ಕ್ರಮ, ಜೀವನ ಶೈಲಿ ಹಾಗೂ ಜಾಗೃತಿ ಮೂಡಿಸಲು ಯುವ ಜನರು ಕಾರ್ಯಪ್ರವೃತ್ತರಾಗಬೇಕು ಎಂದು ಉಡುಪಿ ಜಿಲ್ಲಾ ಕಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್​ ಸಲಹೆ ನೀಡಿದರು.

ಉಡುಪಿಯ ಅಜ್ಜರಕಾಡುನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರಿಯ ಆರೋಗ್ಯ ಅಭಿಯಾನ ಜಿಲ್ಲಾ ಸರ್ವೇಕ್ಷಣಾ ಘಟಕ ಎನ್​ಸಿಡಿ ವಿಭಾಗ, ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮ ಇವರ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಪಾರ್ಶ್ವವಾಯು ದಿನಾಚರಣೆ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ ಮಾತನಾಡಿ, ಸಾರ್ವಜನಿಕರಲ್ಲಿ ಪಾರ್ಶ್ವವಾಯು ಕುರಿತು ಅರಿವು ಮೂಡಿಸಲು ನರ್ಸಿಂಗ್​ ವಿದ್ಯಾರ್ಥಿಗಳ ಪಾತ್ರ ಬಹಳ ದೊಡ್ಡದು. ಜೀವಸತ್ವಗಳಿರುವ ಉತ್ತಮ ಆಹಾರ ಪದ್ಧತಿಯಿಂದ ದೇಹದ ಸೂಕ್ತ ಕಾರ್ಯನಿರ್ವಹಣೆಗೆ ಅಗತ್ಯವಾದ ಪೋಷಕಾಂಶ ಲಭಿಸುತ್ತದಲ್ಲದೆ, ಪಾರ್ಶ್ವವಾಯು ಕಾಡುವ ಅಪಾಯವನ್ನೂ ಕಡಿಮೆ ಮಾಡುತ್ತದೆ ಎಂದರು.

ಪಾರ್ಶ್ವವಾಯು ಕಾಯಿಲೆ ಕುರಿತು ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ವಾಸುದೇವ ಉಪನ್ಯಾಸ ನೀಡಿದರು. ನಿರಮಯ ನರ್ಸಿಂಗ್​ ಕಾಲೇಜಿನ ಉಪಾನ್ಯಾಸಕಿ ಜನ್ನಿರ್​, ಜಿಲ್ಲಾಸ್ಪತ್ರೆಯ ನರ್ಸಿಂಗ್​ ಅಧಿಕಾರಿ ಲೀಲಾವತಿ ಇತರರು ಉಪಸ್ಥಿತರಿದ್ದರು.

ಒಂದು ನಿಮಿಷಕ್ಕೆ ಮೂವರಿಗೆ ಪಾರ್ಶ್ವವಾಯು ಕಾಯಿಲೆಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಚ್​.ಅಶೋಕ್​ ಮಾತನಾಡಿ, ಭಾರತದಲ್ಲಿ ಒಂದು ಲಕ್ಷ ಜನಸಂಖ್ಯೆಗೆ 145 ಜನರು ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದು, ಪ್ರತಿ ಒಂದು ನಿಮಿಷಕ್ಕೆ ಮೂವರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಕಡಿಮೆ ಮಾಡಲು ಯವಜನತೆ ತಮ್ಮ ಆಹಾರ ಶೈಲಿ ಮತ್ತು ನಿಯಮಿತ ದೈಹಿಕ ಚಟುವಟಿಕೆಯತ್ತ ಕಾಳಜಿ ನೀಡಬೇಕು. ಅದರಿಂದ ಆರೋಗ್ಯಕರ ಹೃದಯ ರಕ್ತನಾಳದ ವ್ಯವಸ್ಥೆ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ. ಉಪಯುಕ್ತ ಆಹಾರ ಆಯ್ಕೆಯು ಪಾರ್ಶ್ವವಾಯು ತಡೆಗಟ್ಟುವಿಕೆ ಸಾಧ್ಯವಾಗುವುದಲ್ಲದೆ, ದೀರ್ಘಕಾಲೀನ ಆರೋಗ್ಯ ಹೊಂದಲು ಪೂರ್ವಭಾವಿ ಕ್ರಮ ಅನುಸರಿಸಬೇಕು ಎಂದು ತಿಳಿಸಿದರು.