ಜಿಲ್ಲೆ

ಸಂಪತ್ತು, ಅಧಿಕಾರ ಸಮವಾಗಿ ಹಂಚಿಕೆಯಾಗಲಿ: ಹಿರಿಯ ಸಿವಿಲ್ ನ್ಯಾಯಾಧೀಶೆ ವಾಣಿ ಎ.ಶೆಟ್ಟಿ ಹೇಳಿಕೆ

ಮಂಡ್ಯ: ಪ್ರಕೃತಿಯಲ್ಲಿ ಸಂಪತ್ತು ಮತ್ತು ಅಧಿಕಾರ ಸಮಾನವಾಗಿ ಹಂಚಿಕೆಯಾದಾಗ ಸಾಮಾಜಿಕ ನ್ಯಾಯ ಲಭ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ವಾಣಿ ಎ.ಶೆಟ್ಟಿ ಹೇಳಿದರು.

ನಗರದ ಸಂತ ಜೋಸೆಫರ ಬಿಇಡಿ ಕಾಲೇಜು ಸಭಾಂಗಣದಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಡ್ಯ, ಪಿಇಎಸ್ ಕಾನೂನು ಕಾಲೇಜು ಮತ್ತು ಕಾನೂನು ಸೇವಾ ಘಟಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಂತ ಜೋಸೆಫರ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ವಿಶ್ವ ಸಾಮಾಜಿಕ ನ್ಯಾಯದ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಡತನ, ನಿರುದ್ಯೋಗ, ಬಡವರು ಶೋಷಣೆಗೆ ಒಳಪಟ್ಟವರನ್ನು ಆರ್ಥಿಕವಾಗಿ ಮೇಲೆ ತರುವುದೇ ಸಾಮಾಜಿಕ ನ್ಯಾಯವಾಗಿದೆ. ರಾಷ್ಟ್ರ ಅಭಿವೃದ್ದಿಯಾಗಲು ಸಾಮಾಜಿಕ ನ್ಯಾಯ ದೊರೆಯಬೇಕಿದೆ. ವಿಶ್ವದಾದ್ಯಂತ ಬಡತನ, ನಿರುದ್ಯೋಗ, ಶಿಕ್ಷಣ ಕೊರತೆ, ಮಾನವ ಹಕ್ಕುಗಳ ರಕ್ಷಣೆ ಇಲ್ಲದೆ ಇರುವಂತ ಅನೇಕ ಸಮಸ್ಯೆಗಳಿವೆ. ಇಂತಹ ಸಮಸ್ಯೆಗಳನ್ನು ತಡೆಗಟ್ಟಲು ಮತ್ತೆ ಸಾಮಾಜಿಕ ಅಸಮಾನತೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸುವ ಉದ್ದೇಶದಿಂದ ಫೆ.20ರಂದು ವಿಶ್ವ ಸಾಮಾಜಿಕ ನ್ಯಾಯದ ದಿನವೆಂದು ಘೋಷಣೆಯಾಗಿದೆ. ಶೈಕ್ಷಣಿಕ ಜೀವನದಲ್ಲಿ ಪ್ರಶಿಕ್ಷಣಾರ್ಥಿಗಳು ನೀವು ಶಿಕ್ಷಕರಾಗುವವರಿದ್ದೀರಿ, ಇದರ ಮಹತ್ವವನ್ನು ತಿಳಿದುಕೊಳ್ಳಿ, ವಿಶ್ವದಾದ್ಯಂತ ಶಾಂತಿ ಮತ್ತು ಸೌಹಾರ್ಧಯುತ ಬಾಳಲು ಇಂತಹ ವಿಚಾರಗಳು ಕಾನೂನು ಅರಿವು ಅವಶ್ಯವಿದೆ ಎಂದು ತಿಳಿಸಿದರು.

ಸಹಾಯಕ ಪ್ರಾಧ್ಯಾಪಕ ಕೆ.ಎಸ್.ಜಯಕುಮಾರ್ ಮಾತನಾಡಿ, ಸಾಮಾಜಿಕವಾಗಿ ನ್ಯಾಯಸಮ್ಮತತೆಯನ್ನು ಉತ್ತೇಜಿಸುವ ಸಲುವಾಗಿ ದಿನವನ್ನು ಆಚರಿಸಲಾಗುತ್ತಿದೆ. ಶಿಕ್ಷಣ, ಉದ್ಯೋಗ, ಆರೋಗ್ಯ ಎಲ್ಲರಿಗೂ ಸಮಾನ ಪ್ರವೇಶವಾಗಿದೆ. ಜಾತಿ, ಧರ್ಮ, ಲೈಂಗಿಕತೆ, ಲಿಂಗ ಅಥವಾ ವರ್ಗವನ್ನು ಲೆಕ್ಕಿಸದೆ ಪ್ರತಿಯೊಬ್ಬರೂ ಈ ವಿಷಯಗಳ ಒಂದೇ ಮಾನದಂಡಗಳಿಗೆ ಸಮಾನ ಪ್ರವೇಶವನ್ನು ಹೊಂದಿರಬೇಕು ಎನ್ನುವುದು ಇದರ ಉದ್ದೇಶವಾಗಿದೆ. 2024ರ ಘೋಷವಾಕ್ಯವಾಗಿ ಅಂತರವನ್ನು ನಿವಾರಿಸುವುದು, ಮೈತ್ರಿಗಳನ್ನು ನಿರ್ಮಿಸುವುದು ಎನ್ನುವುದನ್ನು ವಿಶ್ವಸಂಸ್ಥೆ ಪ್ರಕಟಿಸಿದೆ. ಸಾಮಾಜಿಕ ನ್ಯಾಯ ಎಲ್ಲರಿಗೂ ಲಭ್ಯವಾಗಬೇಕಿದೆ ಎಂದು ನುಡಿದರು.

ಹೆಣ್ಣು ಭ್ರೂಣ ಹತ್ಯೆ ಕುರಿತು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ಉಪನ್ಯಾಸ ನೀಡಿದರು. ಸಂತ ಜೋಸೆಫರ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಆಡಳಿತಾಧಿಕಾರಿ ಸಿಸ್ಟಿರ್ ಫ್ರಿಡೋಲಿನ್, ಪ್ರಭಾರ ಪ್ರಾಂಶುಪಾಲೆ ಮಮತಾ ಕ್ರಿಸ್ಟಿನಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯಕ್ರಮಾಧಿಕಾರಿ ಧರಣಿಕುಮಾರ್, ಅಧಿಕಾರಿ ರಾಜೇಂದ್ರ ಇತರರಿದ್ದರು.