ಜಿಲ್ಲೆ

ಸುಗಮ ಸಂಗೀತ ಸಾಹಿತ್ಯದ ಎದೆಮಿಡಿತ: ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಸುಗಮ ಸಂಗೀತ ಸಾಹಿತ್ಯದ ಎದೆಮಿಡಿತವಾಗಿದೆ. ಸಂಗೀತಕ್ಕಾಗಿ ಸಾಹಿತ್ಯವಿಲ್ಲ, ಸಾಹಿತ್ಯಕ್ಕಾಗಿ ಸಂಗೀತವಿದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.

ಇಲ್ಲಿನ ದ್ವಾರಕಾನಗರದಲ್ಲಿ ಪ್ರತಿಭಾಂಜಲಿ ಸುಗಮಸಂಗೀತ ಅಕಾಡೆಮಿ, ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ, ದ್ವಾರಕಾನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಸಹಯೋಗದಲ್ಲಿ ಸುಗಮ ಸಂಗೀತ ಪಿತಾಮಹ ಪಿ.ಕಾಳಿಂಗರಾವ್ ಅವರ ಜನ್ಮದಿನಾಚರಣೆ ಮತ್ತು ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಶ್ವ ಸುಗಮ ಸಂಗೀತ ದಿನ-ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಗಣೇಶೋತ್ಸವದಲ್ಲಿ ಯುವಕರು ಡಿಜೆ ಸಂಗೀತ ಅಬ್ಬರಕ್ಕೆ ಮಾರುಹೋಗಿದ್ದಾರೆ. ಆದರೆ ದ್ವಾರಕಾನಗರದ ನಿವಾಸಿಗಳು ಸಂಗೀತ, ಸುಗಮಸಂಗೀತಕ್ಕೆ ಹೆಚ್ಚು ಮಹತ್ವ ನೀಡಿ, ಸಂಗೀತ ಗಾಯನ ಮಾಡುತ್ತಿರುವುದು ಶ್ಲಾಘನೀಯ. ಸಂಗೀತ ಸೌಮ್ಯವಾಗಿದ್ದರೆ, ಮಧುರವಾಗಿದ್ದರೆ ಎಲ್ಲರೂ ಆಲಿಸುತ್ತಾರೆ ಎಂದರು.

ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್ ಮಾತನಾಡಿ, 20ನೇ ಶತಮಾನದ ಸುಗಮ ಸಂಗೀತ ಹೆಚ್ಚು ಪ್ರವರ್ಧಮಾನಕ್ಕೆ ಬಂದಿತು. ಇದಕ್ಕೆ ಕಾರಣ ಹಾಡುಗಾರ ಮತ್ತು ಸಂಗೀತ ಸಂಯೋಜಕ ಪಿ.ಕಾಳಿಂಗರಾವ್. ಶಾಸ್ತ್ರೀಯ ಸಂಗೀತಕ್ಕೂ ಸುಗಮ ಸಂಗೀತಕ್ಕೂ ಬಾರಿ ಅಜಗಜಾಂತರವಿದೆ. ಕವಿತೆ, ಸಾಹಿತ್ಯಕ್ಕೆ ಹೆಚ್ಚು ಮಹತ್ವ ನೀಡಿ ಸುಗಮ ಸಂಗೀತವನ್ನು ಸಂಯೋಜಿಸಲಾಗುತ್ತದೆ. ಸುಗಮ ಸಂಗೀತವನ್ನು ಅಭ್ಯಾಸ ಮಾಡಿದರೆ ಬರುತ್ತದೆ ಎಂದು ಸಲಹೆ ನೀಡಿದರು.

ಜಿಲ್ಲಾ ಸರ್ಕಾರಿ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಎನ್‌ವೈಕೆ ನಿವೃತ ಅಧಿಕಾರಿ ಎಚ್.ಎಂ.ಬಸವರಾಜು, ಅಲಯನ್ಸ್ ಸಂಸ್ಥೆ 2ನೇ ಜಿಲ್ಲಾ ಪ್ರಾಂತಪಾಲ ಚಂದ್ರಶೇಖರ್, ಪವಿತ್ರಾ ನಾಗರಾಜ್, ಪತ್ರಕರ್ತ ನವೀನ್ ಚಿಕ್ಕಮಂಡ್ಯ, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್‌ಕುಮಾರ್ ಇತರರಿದ್ದರು. ಇದೇ ಸಂದರ್ಭದಲ್ಲಿ ಗಾಯಕರು ವಿವಿಧ ಗೀತೆಗಳನ್ನು ಹಾಡಿದರು.