ಬ್ಯಾಡಗಿ: ಗ್ರಾಮೀಣ ಪ್ರದೇಶದಲ್ಲಿ ಜನಪ್ರಿಯತೆ ಪಡೆದಿದ್ದ ಕಬಡ್ಡಿ ಕ್ರೀಡೆಗೆ ವಿಶ್ವ ಮಾನ್ಯತೆ ದೊರೆತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಖ್ಯಾತಿ ಹೆಚ್ಚಿಸಿದೆ ಎಂದು ಪಾಟ್ನಾ ಪೈರೇಟ್ಸ್ ಮಾಜಿ ಕೋಚ್ ಹಾಲಿ ಥೈಲ್ಯಾಂಡ್ ಕಬಡ್ಡಿ ತಂಡದ ಕೋಚ್ ರವೀಂದ್ರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಿಇಎಸ್ ಕಾಲೇಜ್, ಅಮೆಚೂರ್ ಕಬಡ್ಡಿ ಸಂಸ್ಥೆ ಬ್ಯಾಡಗಿ ಆಶ್ರಯದಲ್ಲಿ ಜರುಗಿದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಕಬಡ್ಡಿ ಕ್ರೀಡೆ ಇತ್ತೀಚಿನ ದಿನಗಳಲ್ಲಿ ವೃತ್ತಿಪರ (ಪ್ರೊಫೆಷನಲ್) ಕ್ರೀಡೆಯಾಗಿ ಹೊರಹೊಮ್ಮಿದೆ. ಇತ್ತೀಚಿನ ಪ್ರೋ ಕಬಡ್ಡಿ ಲೀಗ್ ಆವೃತ್ತಿಗಳು ಕಬಡ್ಡಿಯ ಜನಪ್ರಿಯತೆ ದೇಶ ಸೇರಿ ವಿಶ್ವದ ಬಹಳಷ್ಟು ದೇಶದ ಬಾಗಿಲು ತಟ್ಟುತ್ತಿದೆ. ಬಂಡವಾಳಶಾಹಿಗಳೂ ಹಣ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಕ್ರಿಕೆಟ್ ಬಳಿಕ ಅತ್ಯಂತ ಜನಪ್ರಿಯ ಕ್ರೀಡೆಯಾಗಿ ಭಾರತದಲ್ಲಿ ಕಬಡ್ಡಿ ಹೊರ ಹೊಮ್ಮಿದೆ ಎಂದರು.
ತಾಲೂಕಾಸ್ಪತ್ರೆ ವೈದ್ಯಾಧಿಕಾರಿ ಡಾ.ಪುಟ್ಟರಾಜು ಮಾತನಾಡಿ, ಕಬಡ್ಡಿ ಆಡುವುದರಿಂದ ಸ್ಥಿರವಾದ ಆರೋಗ್ಯ ಸೇರಿ ದೈಹಿಕ ಸಾಮರ್ಥ್ಯ ಹೆಚ್ಚುವುದು, ಚುರುಕುತನ, ಸಹಿಷ್ಣುತೆ ಉತ್ತೇಜಿಸಲು ಸಹಾಯ ಮಾಡಲಿದೆ. ರಕ್ತದ ಪರಿಚಲನೆ ಹೆಚ್ಚಿಸಲಿದ್ದು, ಮಾನಸಿಕ ದೃಢತೆ ಸ್ಥಿತಿಸ್ಥಾಪಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದರು.
ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಡಾ. ನೀಲೇಶ, ಕಬಡ್ಡಿ ಸಂಸ್ಥೆ ಅಧ್ಯಕ್ಷ ಸಿ.ಜಿ. ಚಕ್ರಸಾಲಿ, ಗೌರವಾಧ್ಯಕ್ಷ ಗಂಗಣ್ಣ ಎಲಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ಪ್ರಾಚಾರ್ಯ ಡಾ.ಎಸ್.ಜಿ. ವೈದ್ಯ, ಟಿಎಚ್ಒ ಡಾ.ಕಾಂತೇಶ ಭಜಂತ್ರಿ, ಉಪನ್ಯಾಸಕರಾದ ಸುರೇಶ ಪಾಂಗಿ, ಪ್ರಭು ದೊಡ್ಮನಿ, ಹಿರಿಯ ಕ್ರೀಡಾಪಟುಗಳಾದ ಗಿರೀಶಗೌಡ ಪಾಟೀಲ, ಜಿನ್ನಾ ಹಲಗೇರಿ, ಶಿವಣ್ಣ ಜಂಗರಡ್ಡೇರ, ರವಿ ಶೆಟ್ಟಿ, ಪ್ರಕಾಶ ತಾವರಗಿ, ವಿಜಯ ಮಾಳಗಿ, ಬಸವರಾಜ ಸೊಟ್ಟೇರ, ಕೋಚ್ ಮಂಜುಳ ಭಜಂತ್ರಿ, ಮಲ್ಲೇಶ ಭಂಡಾರಿ, ಅಮಾನ್ ಹಲಗೇರಿ, ತೀರ್ಪಗಾರರಾದ ವಿ.ಆರ್. ಬಾಸೂರ, ರಮೇಶ ಕರಬಣ್ಣವರ, ಬಿ.ಸಿ. ದಾಣ್ಗಲ್, ಬಸವರಾಜ ಹೊಸಪೇಟಿ, ಎಂ.ಎಸ್. ಹೊಸ್ಮನಿ, ಎಂ.ವಿ. ಕುಮಾರಸ್ವಾಮಿ, ನಾಗರಾಜ ಮೆಡ್ಲೇರಿ, ಇತರರಿದ್ದರು.
ಹಾನಗಲ್ಲ ಕಾಲೇಜ್ಗೆ ಪ್ರಥಮ ಸ್ಥಾನ
ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ 12 ಕಾಲೇಜುಗಳು ಪಾಲ್ಗೊಂಡಿದ್ದವು. ಹಾನಗಲ್ಲನ ಶ್ರೀ ಕುಮಾರೇಶ್ವರ ಕಾಲೇಜು ಪ್ರಥಮ ಸ್ಥಾನ ಮತ್ತು ಬ್ಯಾಡಗಿ ಬಿಇಎಸ್ಎಂ ಕಾಲೇಜ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಬೆಸ್ಟ್ ರೈಡರ್ ಭರತಕುಮಾರ, ಡಿಫೆಂಡರ್ ವೀರೇಶ ಮುಗದೂರು ಬೆಸ್ಟ್ ಆಲ್ ರೌಂಡರ್ ಮನು ಮೈಲಾರ ವೈಯಕ್ತಿಕ ಪ್ರಶಸ್ತಿಗಳಿಗೆ ಭಾಜನರಾದರು.