ಗದಗ: ಶುಕ್ರವಾರದಂದು ವಿಶ್ವ ರೇಬಿಸ್ ದಿನದ ಅಂಗವಾಗಿ ಗದಗ ಜಿಲ್ಲಾಡಳಿತ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ವಿಶ್ವ ರೇಬಿಸ್ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಠೋಡ ಅವರು ಮಾತನಾಡಿ ನಾಯಿ, ಬೆಕ್ಕು ಇತರೇ ಪ್ರಾಣಿಗಳು ಕಚ್ಚಿದಾಗ ನಿರ್ಲಕ್ಷ್ಯವಹಿಸದೇ ತಕ್ಷಣವೇ ಸಾಬೂನಿನಿಂದ ಕನಿಷ್ಟ 10 ನಿಮಿಷಗಳವರೆಗೆ ಚೆನ್ನಾಗಿ ತೊಳೆದು ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಹೇಳಿದರು. ಸಾಮಾನ್ಯವಾಗಿ ರೇಬಿಸ್ ಸೋಂಕು ಹೊಂದಿದ ಪ್ರಾಣಿಗಳಲ್ಲಿ ನಾಯಿಗಳಿಂದ 97% ರಷ್ಟು, ಬೆಕ್ಕುಗಳಿಂದ 2% ಹಾಗೂ ಇತರೇ ಪ್ರಾಣಿಗಳಿಂದ 1% ರಷ್ಟು ರೋಗ ಹರಡುವ ಸಾಧ್ಯತೆಯಿದೆ. ಇವುಗಳ ಕಡಿತದಿಂದ, ಪರಚುವಿಕೆಯಿಂದ, ತೆರೆದ ಚರ್ಮದ ಮೇಲೆ ನೆಕ್ಕುವಿಕೆಯಿಂದ, ಜೊಲ್ಲಿನ ಸಂಪರ್ಕದಿಂದ ರೋಗ ಹರಡುವ ಸಾಧ್ಯತೆ ಇದ್ದು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಇದಕ್ಕೆ ಔಷಧಿ ಲಭ್ಯವಿರುವಂತೆ ಕ್ರಮ ವಹಿಸಲಾಗಿದೆ ಎಂದರು.
ರೇಬಿಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಸೂಕ್ಷ್ಮ ಜೀವ ಶಾಸ್ತ್ರಜ್ಞ ಲೂಯಿಸ್ ಪಾಶ್ಚ್ಚರ್ಚ್ ರವರ ಸ್ಮರಣಾರ್ಥವಾಗಿ ವಿಶ್ವ ರೇಬಿಸ್ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷದ ಘೋಷವಾಕ್ಯ ರೇಬಿಸ್: “ಎಲ್ಲರೂ ಆರೋಗ್ಯಕ್ಕಾಗಿ, ಒಂದು ಆರೋಗ್ಯ ಎಲ್ಲರಿಗಾಗಿ” ಎಂಬ ಘೋಷವಾಕ್ಯದೊಂದಿಗೆ ವಿಶ್ವ ರೇಬಿಸ್ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಇದೊಂದು ಮಾರಕ ರೋಗವಿದ್ದು, 100% ಇದನ್ನು ತಡೆಗಟ್ಟಬಹುದಾಗಿದೆ. ವರ್ಷಕ್ಕೆ 20 ಸಾವಿರ ಸಾವುಗಳು ಭಾರತದಲ್ಲಿ ರೇಬಿಸ್‍ನಿಂದ ಆಗುತ್ತಿವೆ ಕಾರಣ ರೇಬಿಸ್ ಲಸಿಕೆಯ ಬಗ್ಗೆ ಭಯ ಬಿಟ್ಟು ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಬಹುದು ಎಂದರು.
ರೇಬಿಸ್ ಒಂದು ವೈರಾಣುವಿನಿಂದ ಹರಡುವ ಮಾರಕ ಖಾಯಿಲೆ ಇದ್ದು ಇದರ ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ರೋಗವನ್ನು ಸೋಲಿಸುವಲ್ಲಿ ಪ್ರಗತಿಯನ್ನು ಸಾಧಿಸಲು ಈ ದಿನವನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ.
ಹಾಲುಣಿಸುವ ತಾಯಂದಿರು 1 ವರ್ಷದೊಳಗಿನ ಮಕ್ಕಳು ಮತ್ತು ವಯಸ್ಕರು ಸಹ ಪ್ರಾಣಿಗಳು ಕಡಿದಾಗ ರೇಬಿಸ್ ವಿರುದ್ಧ ಲಸಿಕೆಯನ್ನು ತಪ್ಪದೇ ತೆಗೆದುಕೊಳ್ಳುವ ಮೂಲಕ ಪ್ರತಿಯೊಬ್ಬರೂ ಮುಂಜಾಗ್ರತೆ ವಹಿಸಬೇಕು ಹಾಗೂ ಸಾಕು ಪ್ರಾಣಿಗಳಿಗೂ ಕೂಡ ತಪ್ಪದೇ ಪ್ರತಿವರ್ಷ ಲಸಿಕೆ ಹಾಕಿಸಿ ಎಂದು ತಿಳಿಸಲಾಯಿತು.
ಡಾ. ಪ್ರೀತ ಖೋನಾ, ತಾಲೂಕಾ ಆರೋಗ್ಯಾಧಿಕಾರಿಗಳು, ಗದಗ ರವರು ಮಾತನಾಡಿ ನಾಯಿಕಡಿತ ಸಂಭವಿಸಿದ ತಕ್ಷಣದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹತ್ತಿರವಿರುವ ಸರಕಾರಿ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಲು ಸೂಚಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ ಮಾತನಾಡಿ ರೇಬಿಸ್ ನಿಯಂತ್ರಣದ ಬಗ್ಗೆ ಆಶಾ ಕಾರ್ಯಕರ್ತೆಯರ ಪಾತ್ರ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಡಾ. ರವಿ ಕಡಗಾವಿ, ಜಿಲ್ಲಾ ಎಪಿಡೆಮಿಯೋಲಾಜಿಸ್ಟ್ ಡಾ.ಪ್ರವೀಣ ನಿಡಗುಂದಿ, ಜಿಲ್ಲಾ ತಂಬಾಕು ನಿಯಂತ್ರಣಕೋಶದ ಸಲಹೆಗಾರರಾದ ಗೋಪಾಲ ಸುರಪುರ ಹಾಗೂ ಜಿಲ್ಲಾ ಸಮೀಕ್ಷಣಾ ಘಟಕದ ಎಲ್ಲ ಸಿಬ್ಬಂದಿಯವರು ಹಾಜರಿದ್ದರು. ಎಮ್.ಎಸ್.ರಬ್ಬನಗೌಡ್ರ ರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು