ಜಿಲ್ಲೆ

ಜನಸಂಖ್ಯೆ ನಿಯಂತ್ರಿಸದಿದ್ದರೆ ಸಮಸ್ಯೆ ಹೆಚ್ಚು: ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ ಎಚ್ಚರಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಿಯಂತ್ರಣ ಮಾಡದಿದ್ದರೆ ಮುಂದಿನ ಪೀಳಿಗೆಗೆ ಮೂಲ ಸೌಕರ್ಯದ ಕೊರತೆ ಕಟ್ಟಿಟ್ಟ ಬುತ್ತಿ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ ಎಚ್ಚರಿಕೆ ನೀಡಿದರು.

ನಗರದ ತಾವರೆಗೆರೆಯ ಎಸ್.ಬಿ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಬೆಳೆದಂತೆ ಭೂಮಿ ಬೆಳೆಯುವುದಿಲ್ಲ. ಆದರೆ ಜನರಿಗೆ ಬದುಕಲು ಭೂಮಿಯ ಮೇಲೆ ಜಾಗವು ಕೂಡ ಸಿಗುವುದಿಲ್ಲ. ಜನಸಂಖ್ಯೆ ನಿಯಂತ್ರಣ ಮಾಡುವುದಕ್ಕಾಗಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಮಾಡಬೇಕು. ಇದರಿಂದ ಜನರ ಮನಸ್ಸಿಗೂ ಅರಿವು ಮೂಡಿಸಿದಂತಾಗುತ್ತದೆ. ಜತೆಗೆ ಎಷ್ಟೋ ಬಾಲ್ಯ ವಿವಾಹಗಳು ಸಹ ಕಡಿಮೆ ಆಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಹೆಚ್ಚುತ್ತಿರುವ ಜನಸಂಖ್ಯಾ ಪ್ರಮಾಣವನ್ನು ಕಡಿಮೆ ಮಾಡಬೇಕು. ಜತೆಗೆ ಜನಸಂಖ್ಯಾ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಘೋಷವಾಕ್ಯ ಗಳೊಂದಿಗೆ ಕಾರ್ಯಕ್ರಮ ಆಚರಣೆ ಮಾಡಲಾಗುತ್ತಿದೆ. ಎಷ್ಟೋ ಹೆಣ್ಣುಮಕ್ಕಳು ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ ಇರುತ್ತಾರೆ. ಇದಕ್ಕೆ ಪಾಲಕರು ಸಹಕಾರ ನೀಡಿ ಅವರ ಸಾಧನೆಗೆ ಬೆಂಬಲ ನೀಡಬೇಕು. ಇಲ್ಲವಾದಲ್ಲಿ ಹೆಣ್ಣು ಮಕ್ಕಳ ಜೀವನ ಮದುವೆ, ಸಂಸಾರ ಎಂಬ ಜಂಜಾಟದಲ್ಲೇ ಮುಳುಗಿ ಹೋಗುತ್ತದೆ. ಇದರಿಂದ ಅವರ ಸಾಧನೆಯು ಮಟ್ಟವು ಕುಂಠಿತವಾಗುತ್ತದೆ ಮತ್ತು ಅವರ ಮನಸ್ಸಿನ ಮೇಲೂ ಪ್ರಭಾವ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಆರ್.ಗಾಯತ್ರಿ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲೆ ಎಚ್.ಎಂ.ಮಮತಾ, ಜಿಲ್ಲಾ ರೋಗವಾಹಕ ಆಶ್ರಿತರೋಗ ನಿಯಂತ್ರಣಾಧಿಕಾರಿ ಡಾ.ಎನ್.ಕಾಂತರಾಜ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎನ್.ಆಶಾಲತಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್.ಕುಮಾರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್ಕುಮಾರ್, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ.ಕೆ.ಆರ್.ಶಶಿಧರ್, ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ಮಿಮ್ಸ್ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ವಿನಯ್ ಇತರರಿದ್ದರು.

ಇದೇ ಸಂದರ್ಭದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜನರಲ್ಲಿ ಅರಿವು ಜಾಗೃತಿ ಮೂಡಿಸುವ ಸಲುವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಡಿಯೋ ರೀಲ್ಸ್, ಕಿರುಚಿತ್ರ, ಫೋಸ್ಟರ್ ರಚನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಂತೆಯೇ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು.