ಜಿಲ್ಲೆ

ಅಮೆರಿಕಾದ ಗುಡ್ಡುಗಾಡು ಓಟದಲ್ಲಿ ಗುರುಪ್ರಸಾದ್​ ಚಿನ್ನದ ಸಾಧನೆ

ತುಮಕೂರು: ವಿಶ್ವ ಪೊಲೀಸ್​ ಮತ್ತು ಫೈರ್​ ಗೇಮ್​ -2025 ಕ್ರೀಡಾಕೂಟದ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ತುಮಕೂರಿನ ಗುರುಪ್ರಸಾದ್​ ಎರಡು ಚಿನ್ನದ ಪದಕ ಹಾಗೂ 800 ಮೀ., ಓಟ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಅಮೆರಿಕಾದ  ಬರ್ಮಿಂಗ್ಹ್ಯಾಮ್‌ ಆಲ್ಬಮದಲ್ಲಿ ನಡೆದ ವಿಶ್ವ ಪೊಲೀಸ್​ ಮತ್ತು ಫೈರ್​  ಗೇಮ್​-2025ರ ಗುಡ್ಡಗಾಡು (ಕ್ರಾಸ್​ ಕಂಟ್ರಿ) ಓಟ 10 ಕಿ.ಮೀ., ಹಾಗೂ 5 ಕಿ.ಮೀ., ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಗುರುಪ್ರಸಾದ್​ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. 800 ಮೀ., ಓಟದಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ತುಮಕೂರಿನ ತಿಲಕ್ ಪಾರ್ಕ್​ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗುರುಪ್ರಸಾದ್​ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇತ್ತೀಚೆಗೆ ಗುಜರಾತಿನ ಗಾಂಧಿನಗರದಲ್ಲಿ ನಡೆದ ಅಖಿಲಭಾರತ ಪೊಲೀಸ್​ ಕ್ರೀಡಾಕೂಟ ಕ್ರಾಸ್​ ಕಂಟ್ರಿ ಸ್ಪರ್ಧೆಯಲ್ಲಿ ಪದಕ ವಿಜೇತರಾಗಿ

ವಿಶ್ವ ಪೊಲೀಸ್​ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು.

ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳಿಯ ಹೊಸೂರು ಗ್ರಾಮದ ಗುರುಪ್ರಸಾದ್​ ಈ ಸಾಧನೆಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಹಾಗೂ ಜಿಲ್ಲಾ ಅಥ್ಲೆಟಿಕ್ಸ್​ ಸಂಸ್ಥೆ ಕಾರ್ಯದರ್ಶಿ ಎ.ಎನ್​.ಪ್ರಭಾಕರ್​ ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.