ಜಿಲ್ಲೆ

ಬಸವಣ್ಣ ಚಿಂತನೆಯಿಂದ ವಿಶ್ವ ಶಾಂತಿ ಸಾಧ್ಯ

ಸದೇಶ್ ಕಾರ್ಮಾಡ್

ಮೈಸೂರು: ಜಗಜ್ಯೋತಿ ಬಸವಣ್ಣ ಅವರ ವಿಚಾರಧಾರೆಗಳನ್ನು ವಿಶ್ವದ ಎಲ್ಲ ರಾಷ್ಟ್ರಗಳು ಅಳವಡಿಸಿಕೊಂಡರೆ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯ, ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಕುವೆಂಪು ಕನ್ನಡ ಅಧ್ಯಯನ ವತಿಯಿಂದ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಬಸವೇಶ್ವರ ಜಯಂತಿ ಅಂಗವಾಗಿ ‘ವಚನಗಳಲ್ಲಿ ವ್ಯಕ್ತವಾದ ಪುರಾಣ ಶಾಸ್ತ್ರಗಳ ಗ್ರಹಿಕಾ ವಿಧಾನ’ ವಿಷಯದ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಬಸವಾದಿ ಶರಣರ ವಚನಗಳನ್ನು ಕಂಠಪಾಠ ಮಾಡಿದರೆ ಸಾಲದು, ವಚನಗಳ ಸಾರವನ್ನು ನಮ್ಮ ಬದುಕಿನಲ್ಲಿ ಅಳಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಕಾಯಕವೇ ಕೈಲಾಸ’ ಎಂಬ ಅತ್ಯಮೂಲ್ಯವಾದ ಪರಿಕಲ್ಪನೆಯನ್ನು ಬಸವಣ್ಣ ಸಮಾಜಕ್ಕೆ ನೀಡಿದರು. ಪ್ರತಿಯೊಬ್ಬರು ಕಾಯಕ ಜೀವಿಗಳಾಗಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಣವೇ ಕಾಯಕ. ಹಾಗಾಗಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಬೇಕು ಎಂದು ಕಿವಿಮಾತು ಹೇಳಿದರು.

ಬಸವಣ್ಣ ಅವರಲ್ಲಿನ ತಾತ್ವಿಕ ಚಿಂತನೆ, ದಾರ್ಶನಿಕತೆ, ಜೀವಪರ ಕಾಳಜಿ, ವೈಚಾರಿಕ ಪ್ರಜ್ಞೆ ಮತ್ತು ಸವಾಜದಲ್ಲಿ ಅವರು ಉಂಟು ವಾಡಿದ ಕ್ರಾಂತಿಕಾರಕ ಬದಲಾವಣೆಯ ಕಾರಣದಿಂದ ರಾಜ್ಯ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕ ೃತಿಕ ನಾಯಕ ಎಂದು ಗೌರವಿಸಿದೆ ಎಂದರು.

ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ, ಇತ್ತೀಚೆಗೆ ವಚನ ಸಾಹಿತ್ಯದ ಬಗ್ಗೆ ವ್ಯತಿರಿಕ್ತ ಚರ್ಚೆಗಳನ್ನು ಕೆಲವರು ಹುಟ್ಟು ಹಾಕುತ್ತಿದ್ದಾರೆ. 12ನೇ ಶತಮಾನಕ್ಕಿಂತ ಮೊದಲೇ ಅನುಭವ ಮಂಟಪದ ಪರಿಕಲ್ಪನೆ ಇತ್ತು. ವಚನಕಾರರು ವರ್ಣ ಮತ್ತು ಜಾತಿ ವ್ಯವಸ್ಥೆಯನ್ನು ವಿರೋಧಿಸಲಿಲ್ಲ. ಬದಲಿಗೆ ಸಾಂಪ್ರದಾಯಿಕ ವ್ಯವಸ್ಥೆಯನ್ನೇ ಮುಂದುವರೆಸಿದರು ಅನ್ನುತ್ತಿದ್ದಾರೆ. ಈ ರೀತಿ ಹೇಳಿಕೆಗಳು ಜಾತಿವಾದಿ ಮನಸ್ಥಿತಿಯವರ ಸುಳ್ಳು ಸೃಷ್ಟಿಯಾಗಿದೆ ಎಂದರು.

ಸಂಸ್ಕೃತಿ ಚಿಂತಕ ಪ್ರೊ.ಬಸವರಾಜ ಕಲ್ಗುಡಿ ಮಾತನಾಡಿ, ಬಸವಣ್ಣ ಅವರು ಕತ್ತಲಿನಲ್ಲಿದ್ದ ಜನ ಸಮುದಾಯವನ್ನು ತಮ್ಮ ವೈಚಾರಿಕವಾದ ಚಿಂತನೆಗಳ ಮೂಲಕ ಹೊಸ ಹಾದಿಯ ಕಡೆಗೆ ಕೊಂಡೊಯ್ದರು ಎಂದು ಹೇಳಿದರು. ವೇದಿಕೆಯಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಟಿ.ಆರ್. ಚಂದ್ರಶೇಖರ್ ಹಾಗೂ ಇತರರು ಇದ್ದರು.