ವಿಜಯವಾಣಿ ಸುದ್ದಿಜಾಲ ಉಡುಪಿ
ನಮ್ಮೊಳಗೆ ಸಮಾಧಾನ, ಶಾಂತಿ ಅಳವಡಿಸಿಕೊಳ್ಳದಿದ್ದಲ್ಲಿ ಅವುಗಳನ್ನು ಹೊರ ಜಗತ್ತಿನಲ್ಲಿ ಹುಡುಕಲು ಸಾಧ್ಯವಿಲ್ಲ. ವಿಶ್ವದಲ್ಲಿಂದು ಭಾಷಾ ಸಂಘರ್ಷ, ಕೋಮು-ಧರ್ಮ ಸಂಘರ್ಷ, ವ್ಯಕ್ತಿ ವ್ಯಕ್ತಿಗಳ ನಡುವೆ ದ್ವೇಷದ ವಾತಾವರಣದಿಂದಾಗಿ ಶಾಂತಿ ಮರೀಚಿಕೆಯಾಗಿದೆ ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ಅಧ್ಯಕ್ಷ ಶ್ರೀನಿವಾಸ್ ರಾವ್ ಕೆ. ಕಳವಳ ವ್ಯಕ್ತಪಡಿಸಿದರು.
ಉಡುಪಿಯ ಕಾತ್ಯಾಯಿನಿ ನಗರದಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಆಯೋಜಿಸಿದ್ದ ವಿಶ್ವ ಶಾಂತಿ ದಿನಾಚರಣೆಯಲ್ಲಿ ಮಾತನಾಡಿದರು.
ಜಗತ್ತಿಗೆ ಕಾಡುತ್ತಿರುವ ಅಶಾಂತಿ ವಿರುದ್ಧ ಎದ್ದು ನಿಲ್ಲುವ, ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕಿ ಪ್ರೀತಿಯ ಸೇತುವೆ ಕಟ್ಟುವ ಹಾಗೂ ಜಗತ್ತನ್ನು ವಿಭಜಿಸುವಂತಹ ಪೂರ್ವಾಗ್ರಹಗಳನ್ನು ಹಿಮ್ಮೆಟ್ಟಿಸಬಲ್ಲ ಜನರ ಅವಶ್ಯಕತೆ ಇದೆ. ಇವೆಲ್ಲವೂ ಬಾಹ್ಯದ ಶಾಂತಿಗಿಂತ ಆಂತರ್ಯದಲ್ಲಿ ಶಾಂತಿ ಇದ್ದಾಗ ಮಾತ್ರ ಸಾಧ್ಯ ಎಂದು ಶ್ರೀನಿವಾಸ್ ರಾವ್ ಕೆ. ತಿಳಿಸಿದರು.
ಪಾಂಡುರಂಗ ಕಾಮತ್, ನಾಗೇಶ ಮಾತನಾಡಿದರು. ವಿನೋದ ಕಾಮತ್ ಉಪಸ್ಥಿತರಿದ್ದರು.
ವೇದಿಕೆಯ ಸದಸ್ಯರಾದ ವಿದ್ಯಾ, ವೀಣಾ, ವಾಸು ಪಿ., ರಾಘವೇಂದ್ರ, ಉಮೇಶ, ಸಿಂಧು ಡಿ, ರಾಮಕೃಷ್ಣ, ಪ್ರಭಾ, ಕಾವ್ಯಾ, ಉಷಾ, ವೃದ್ಧಿ, ಲಕ್ಷ್ಮೀ, ಸುರೇಶ, ಅನುರಾಧಾ ಜಿ.ಎಸ್. ಇತರರು ಉಪಸ್ಥಿತರಿದ್ದರು.