ಜಿಲ್ಲೆ

ಓಜೋನ್ ರಕ್ಷಣೆ ಮನುಕುಲದ ಹೊಣೆ: ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರ ಸಂಘದ ಅಧ್ಯಕ್ಷ ಡಾ.ಮನೋಹರ್ ಸಲಹೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಸಕಲ ಜೀವ ಸಂಕುಲದ ರಕ್ಷಕವಾದ ಓಜೋನ್ ಪದರದ ಸಂರಕ್ಷಣೆ ಮನುಕುಲದ ಹೊಣೆ ಎಂದು ಜಿಲ್ಲಾ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು ಸಂಘದ ಅಧ್ಯಕ್ಷ ಡಾ.ಮನೋಹರ್ ತಿಳಿಸಿದರು.

ತಾಲೂಕಿನ ಸಂತೆ ಕಸಲಗೆರೆ ಗ್ರಾಮದ ಮುರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜಿನಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಮಂಗಲ, ಜಿಲ್ಲಾ ಸ್ತ್ರೀರೋಗ ಮತ್ತು ಪ್ರಸೂತಿ ವೈದ್ಯರ ಸಂಘ, ಮುರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜು ಸಂತೆಕಸಲಗೆರೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಓಜೋನ್ ದಿನ ಉದ್ಘಾಟಿಸಿ ಮಾತನಾಡಿದ ಅವರು, ಓಜೋನ್ ಪದರವು ಭೂಮಿಯನ್ನು ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಿಸುತ್ತದೆ. ಇದು ಭೂಮಿಯ ಸಕಲ ಜೀವಸಂಕುಲವನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಆದರೆ ಮಾನವನ ಕಾರಣದಿಂದಾಗಿ ಓಜೋನ್ ಪದರವನ್ನು ಸಂರಕ್ಷಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿ ವರ್ಷ ಸೆ.16ರಂದು ವಿಶ್ವ ಓಜೋನ್ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಓಜೋನ್ ಪದರ ತೆಳುವಾಗುತ್ತಿರುವುದರಿಂದ ನೇರಳಾತೀತ ಕಿರಣಗಳು ನೇರವಾಗಿ ಭೂಮಿಯನ್ನು ತಲುಪುತ್ತವೆ. ಪರಿಣಾಮ ಮಾನವರಲ್ಲಿ ಚರ್ಮದ ಕ್ಯಾನ್ಸರ್ ಸೇರಿದಂತೆ ಮುಂತಾದ ಕಾಯಿಲೆಗಳ ಸಾಧ್ಯತೆ ಹೆಚ್ಚಾಗಲಿದೆ. ಆದ್ದರಿಂದ ಓಜೋನ್ ಪದರದ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಪರಿಸರ ಮಾಲಿನ್ಯನಿಯಂತ್ರಣದೊಂದಿಗೆ ಜಾಗತಿಕ ತಾಪಮಾನ ತಡೆಗಟ್ಟುವ ಮೂಲಕ ಓಜೋನ್ ಪದರ ಸಂರಕ್ಷಿಸಬೇಕಿದೆ. ಪದರದ ಕ್ಷಿಪ್ರನಾಶಕ್ಕೆ ಕಾರಣವಾದ ಮಾಲಿನ್ಯಕಾರಕ ಪದಾರ್ಥಗಳು ವಾಯು ಮಂಡಲಕ್ಕೆ ಸೇರದಂತೆ ನಾವು ಜಾಗ್ರತೆ ವಹಿಸಬೇಕು. ಇಲ್ಲದಿದ್ದಲ್ಲಿ ಪದರ ಸಂಪೂರ್ಣ ನಾಶವಾದರೆ ಇಡೀ ಜೀವ ಸಂಕುಲಕ್ಕೆ ತೊಂದರೆಯಾಗುವ ಅಪಾಯವಿದೆ. ಈ ದಿಸೆಯಲ್ಲಿ ಮುಂದಿನ ಪೀಳಿಗೆಗಾಗಿ ಪರಿಸರಕ್ಕೆ ಯಾವುದೇ ಧಕ್ಕೆಯನ್ನುಂಟು ಮಾಡದೆ ನಾವು ವಾಯುಮಂಡಲ ರಕ್ಷಿಸಬೇಕಾಗಿದೆ ಎಂದರು.

ವಿಶ್ವ ಓಜೋನ್ ದಿನದ ಮಹತ್ವ ಕುರಿತು ವಿಜ್ಞಾನ ಸಂವಹನಕಾರ ಸಿ.ಎಲ್.ನಂಜರಾಜು ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಕೆ.ಲೋಕೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಇದೇ ವೇಳೆ ಪರಿಸರ ಪ್ರಶಸ್ತಿ ಪುರಸ್ಕೃತ ವೈ.ರಮೇಶ್ ಅವರನ್ನು ಅಭಿನಂದಿಸಲಾಯಿತು.