ಜಿಲ್ಲೆ

ತಂಬಾಕು ಸೇವನೆಯಿಂದ 80 ಲಕ್ಷ ಜನರ ಸಾವು: ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಮಾಹಿತಿ

ಮಂಡ್ಯ: ಮಾದಕ ವ್ಯಸನಿಗಳು ಹಣಕೊಟ್ಟು ರೋಗ ಮತ್ತು ಸಾವನ್ನು ಖರೀದಿಸುತ್ತಿದ್ದಾರೆ. ತಂಬಾಕು ಸೇವನೆಯಿಂದಾಗಿ ಪ್ರತಿ ವರ್ಷ 80 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.

ನಗರದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಭವನದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ ಮತ್ತು ಪರಿಸರ ಅಲಯನ್ಸ್ ಸಂಸ್ಥೆ ಸಹಯೋಗದಲ್ಲಿ ‘ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ಉದ್ಯಮ ತಂತ್ರ ಬಹಿರಂಗಪಡಿಸುವುದು’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನದ ಆಚರಣೆ ಮತ್ತು ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ತಂಬಾಕು ಸೇವನೆಯಿಂದಾಗಿ ಕ್ಯಾನ್ಸರ್, ಶ್ವಾಸಕೋಶ, ಹೃದಯರಕ್ತನಾಳದ ಕಾಯಿಲೆ ಹೆಚ್ಚಾಗುತ್ತಿವೆ. ರಕ್ತಪರಿಚಲನಾ ವ್ಯವಸ್ಥೆಯ ಸಮಸ್ಯೆಗಳು ಉಲ್ಬಣಗೊಂಡು ಹೃದಯಘಾತ ಸಂಭವಿಸುತ್ತಿವೆ. ಸಾಕಷ್ಟು ಜನರು ಅನೇಕ ಕಾಯಿಲೆಗಳು ಬಂದು ಸಾವನ್ನಪ್ಪುತ್ತಿದ್ದಾರೆ ಎಂದು ನುಡಿದರು.

ವಿಶ್ಯದಲ್ಲಿ ತಡೆಗಟ್ಟಬಹುದಾದ ಸಾವುಗಳಿಗೆ ತಂಬಾಕು ಸೇವನೆಯು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ವಿಶ್ವ ತಂಬಾಕು ರಹಿತ ದಿನವನ್ನು ವಾರ್ಷಿಕವಾಗಿ ಮೇ 31ರಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ತಂಬಾಕು ಸೇವನೆಯಿಂದ ಉಂಟಾಗುವ ಹಾನಿ ಮತ್ತು ಸಾವುಗಳ ಬಗ್ಗೆ ಜಾಗೃತಿ ಮೂಡಿಸಿ. ತಂಬಾಕು ಮುಕ್ತ ಜಗತ್ತನ್ನು ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ. ತಂಬಾಕು ಉತ್ಪನ್ನಗಳ ಬಳಕೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತ 2ನೇ ಸ್ಥಾನದಲ್ಲಿದೆ. ಅದಲ್ಲದೆ ಬೀಡಿ, ಸಿಗರೇಟು ಸೇರಿದಂತೆ ತಂಬಾಕನ್ನು ಬೇರೆ ರೂಪಗಳಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ತಂಬಾಕು ಸೇವೆನೆಯಿಂದ ಕೇವಲ ಗಂಟಲು, ಶ್ವಾಸಕೋಶ ಮಾತ್ರವಲ್ಲದೆ ಅಡಿಯಿಂದ ಮುಡಿವರೆಗೆ ನಮ್ಮ ದೇಹದ ಪ್ರತಿಯೊಂದು ಜೀವಕೋಶದ ಮೇಲೆ ಅದು ಮಾರಕ ಪರಿಣಾಮವನ್ನುಂಟು ಮಾಡುತ್ತದೆಂದು ತಿಳಿದಿದ್ದರೂ ಹಣಕೊಟ್ಟು ರೋಗ ಖರೀಸುತ್ತಿದ್ದಾರೆ ಎಂದು ಎಚ್ಚರಿಸಿದರು.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ತಂಬಾಕು ವರ್ಷಕ್ಕೆ 8 ದಶ ಲಕ್ಷಕ್ಕೂ ಹೆಚ್ಚು ಜನರನ್ನು ಕೊಲ್ಲುತ್ತದೆ. ಅವುಗಳಲ್ಲಿ 7 ಮಿಲಿಯನ್‌ಗಿಂತಲೂ ಹೆಚ್ಚು ಸಾವುಗಳು ನೇರ ತಂಬಾಕು ಸೇವನೆಯಿಂದ ಉಂಟಾಗುತ್ತವೆ. ಅದೇ ಸಮಯದಲ್ಲಿ ಸುಮಾರು 1.2 ಮಿಲಿಯನ್ ಧೂಮಪಾನಿಗಳಲ್ಲದವರು ಸೆಕೆಂಡ್ ಹ್ಯಾಂಡ್ ಹೊಗೆಗೆ ಅನಾರೋಗ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ನಮ್ಮ ದೇಶದ ಕೆಲವು ಕಾನೂನುಗಳು ತುಂಬ ಕಠಿಣ ರೀತಿಯಲ್ಲಿ ಇಲ್ಲ. ಆರೋಗ್ಯ ಮತ್ತು ಇನ್ನೊಬ್ಬರಿಗೆ ತೊಂದರೆ ಕೊಡುವ ಜೀವಹಾನಿ ಕಾನೂನನ್ನುಕಠಿಣಗೊಳಿಸಬೇಕಿದೆ. ಮರಣದಂಡನೆ ವಿಧಿಸುವ ಕಾನೂನು ಬರಬೇಕಿದೆ ಎಂದು ಒತ್ತಾಯಿಸಿದರು.

ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ನಿರ್ದೇಶಕ ಡಾ.ನಾಗರಾಜು ವಿ.ಬೈರಿ, ಜಿಲ್ಲಾ ಗವರ್ನರ್ ಎಚ್.ಮಾದೇಗೌಡ, 1ನೇ ಜಿಲ್ಲಾ ಉಪ ಗವರ್ನರ್ ಕೆ.ಆರ್.ಶಶಿಧರ್ ಈಚಗೆರೆ, 2ನೇ ಉಪ ಗವರ್ನರ್ ಚಂದ್ರಶೇಖರ್, ಪರಿಸರ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಬಸವರಾಜು ಸಂತೆಕಸಲಗೆರೆ, ಶೇಖರ್ ಹನಿಯಂಬಾಡಿ, ವೈರಮುಡಿ, ಸರ್ವಮಂಗಳಾ, ಉಮಾಶಂಕರ್, ನಾಗರಾಜು, ಸೌಮ್ಯಾ, ಶೋಭಾ, ಟಿ.ನಾಗರಾಜು, ಉಮೇಶ್, ಆರ್,ಮಹೇಶ್, ವಿ.ಎಸ್.ನಾಗರಾಜು ಮತ್ತಿತರರಿದ್ದರು.