ಅರಕೇರಾ: ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಶಕ್ತಿ ತುಂಬುವ ಉದ್ದೇಶ ಸಂವಿಧಾನದ ಪೀಠಿಕೆಯಲ್ಲಿದೆ ಎಂದು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಾನಪ್ಪ ಬಡಿಗೇರ್ ಹೇಳಿದರು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪಟ್ಟಣದ ಸಾರ್ವಜನಿಕ ಮೈದಾನದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಸಂವಿಧಾನ ಪೀಠಿಕೆ ಸಾಮೂಹಿಕ ವಾಚನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಸಮಾಜದಲ್ಲಿ ಪ್ರಜಾಪ್ರಭುತ್ವದ ಧ್ಯೇಯೋದ್ಧೇಶಗಳನ್ನು ಈಡೇರಿಸುವಲ್ಲಿ ಸಂವಿಧಾನಕ್ಕೆ ಮಹತ್ವ ಇದೆ. ದೇಶದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗದಿಂದ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಲು ಸಾಧ್ಯ ಎಂದರು.
ಉಪನ್ಯಾಸಕಿ ವಿದ್ಯಾವತಿ ಹಿರೇಮಠ ಮಾತನಾಡಿ, ಭಾರತದ ಸಂವಿಧಾನದ ಸಾರ ಪೂರ್ವ ಪೀಠಿಕೆಯಲ್ಲಿದೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವುದಕ್ಕೆ ಎಲ್ಲರೂ ಪಣತೊಡಬೇಕು ಎಂದರು. ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ರಂಗಮ್ಮ ಸತ್ಯನಾರಾಯಣ ನಾಯಕ ಪೊ.ಪಾ ಉದ್ಘಾಟಿಸಿದರು.
ಸಂವಿಧಾನದ ಪೀಠಿಕೆಯನ್ನು ಉಪ ತಹಸೀಲ್ದಾರ್ ಮನೋಹರ್ ನಾಯಕಗೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಾನಪ್ಪ ಬಡಿಗೇರ್ ಹಸ್ತಾಂತರಿಸಿದರು. ಪಿಡಿಒ ಬೂದೆಪ್ಪ ಯಾದವ್ ಸಂವಿಧಾನದ ಪೀಠಿಕೆ ವಾಚನ ಮಾಡಿದರು. ಪ್ರಮುಖರಾದ ಚಂದ್ರಶೇಖರ ಶೆಟ್ಟಿ, ಬೂದೆಪ್ಪ, ಸಾಹೇಬ್ ಹುಸೇನ್, ಕರೀಂ ಸಾಬ್, ನಾಗರಾಜ ದೇವರಮನಿ, ಕಂದಾಯ ನಿರೀಕ್ಷಕ ಉಮಾಶಂಕರ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಹೂನೂರು ಇತರರಿದ್ದರು.