ಜಿಲ್ಲೆ

ವಿಶ್ವ ಕೊಂಕಣಿ ಕೇಂದ್ರದಲ್ಲಿ ಕ್ಷಿತಿಜ ಕೌಶಲಾಭಿವೃದ್ದಿ ಶಿಬಿರ

Mangaluru - Hariprasad Rai



ಮಂಗಳೂರು : ಭಾರತ್ ಸಮೂಹದ ಆನಂದ ಜಿ.ಪೈ.ಅವರು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದು ಅಲ್ಲಿಯೇ ಉತ್ತಮ ಉದ್ಯೋಗಾವಕಾಶವಿದ್ದರೂ ತಾಯ್ನಡಿನಲ್ಲಿ ಕೌಟುಂಬಿಕ ಉದ್ಯಮಕ್ಕೆ ಮರಳಿ ಅನುಕರಣೀಯ ಮಾದರಿಯಾಗಿದ್ದಾರೆ. ಮಂಗಳೂರಿನ ಸಮೂಹ ಉದ್ಯಮದ ಯಶೋಗಾಥೆ ಯುವ ಜನತೆ ಹಾಗೂ ವಿದ್ಯಾರ್ಥಿಗಳ ಮುನ್ನಡೆಗೆ ಸ್ಪೂರ್ತಿಯಾಗಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಹೇಳಿದರು.
ಶಕ್ತಿನಗರದ ವಿಶ್ವಕೊಂಕಣಿ ಕೇಂದ್ರದಲ್ಲಿ ಆಯೋಜಿಸಿದ ವಿದ್ಯಾಕಲ್ಪಕ ವಿದ್ಯಾರ್ಥಿವೇತನ ಯೋಜನೆಯ ಕ್ಷಿತಿಜ- ಮೂರು ದಿನಗಳ ಉಚಿತ ಕೌಶಲ್ಯಾಭಿವೃದ್ದಿ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರೇರಣಾ ಭಾಷಣ ಮಾಡಿದ ಕೆನರಾ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಆನಂದ .ಜಿ.ಪೈ. ಒಂದು ಸರಳವಾದ ಬೀಡಿ ವ್ಯವಹಾರದೊಂದಿಗೆ ಪ್ರಾರಂಭಗೊಂಡು ಎರಡು ಮೂರು ತಲೆಮಾರುಗಳಲ್ಲಿ, ಕುಟುಂಬದ ಎಲ್ಲ ಸದಸ್ಯರನ್ನು ಒಗ್ಗೂಡಿಸಿಕೊಂಡು ಆಧುನಿಕ ಕಾರ್ಪೊರೇಟ್ ಸಂಸ್ಥೆಯ ರೂಪು ತಳೆದ ಭಾರತ್ ಸಮೂಹದ ಯಶೋಗಾಥೆಯನ್ನು ವಿವರಿಸಿದರು.
ಸಿಎ ಜಯಂತ ಶೆಣೈ ನಗರ್, ವೇದಮೂರ್ತಿ ಗಣಪತಿ ಭಟ್, ಎಂ. ಗಣೇಶ್ ಭಟ್ ಅತಿಥಿಗಳಾಗಿ ಭಾಗವಹಿಸಿದರು. ಡಾ ಬಿ ದೇವದಾಸ ಪೈ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿದ 70 ಮಂದಿ ವಿದ್ಯಾಕಲ್ಪಕ ವಿದ್ಯಾರ್ಥಿವೇತನದ ಫಲಾನುಭವಿಗಳು ಭಾಗವಹಿಸುವ ಈ ಶಿಬಿರದಲ್ಲಿ 27 ಯುವ ಉದ್ಯಮಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಲಿದ್ದಾರೆ.