World Iodine Deficiency Control Day 
ಜಿಲ್ಲೆ

ಅಯೋಡಿನ್ ಕೊರತೆಯಿಂದ ನ್ಯೂನತೆ ಹೆಚ್ಚು

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಪೌಷ್ಟಿಕ ಆಹಾರ ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗಿದ್ದು, ಪ್ರತಿನಿತ್ಯ ಆಹಾರದಲ್ಲಿ ಅಯೋಡಿನ್‌ಯುಕ್ತ ಉಪ್ಪು ಸೇವಿಸುವ ಮೂಲಕ ಅಯೋಡಿನ್ ಕೊರತೆಯಿಂದಾಗುವ ನ್ಯೂನತೆ ತಡೆಗಟ್ಟಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮುರಳಿ ಮೋಹನ್ ಹೇಳಿದರು.
ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣ ಘಟಕದಿಂದ ಹಮ್ಮಿಕೊಂಡಿದ್ದ ವಿಶ್ವ ಅಯೋಡಿನ್ ಕೊರತೆಯ ನಿಯಂತ್ರಣ ದಿನ ಹಾಗೂ ಸಪ್ತಾಹದಲ್ಲಿ ಮಾತನಾಡಿದರು. ಅಯೋಡಿನ್ ಕೊರತೆಯಿಂದಾಗಿ ಮಕ್ಕಳಲ್ಲಿ ಗಳಗಂಡ, ಬುದ್ಧಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ದೈಹಿಕ ಮತ್ತು ಮಾನಸಿಕ ವೈಕಲ್ಯ, ಕುಂಠಿತ ಬೆಳವಣಿಗೆ, ಕಿವುಡು ಮತ್ತು ಮೂಕತನ, ಮೆಳ್ಳಗಣ್ಣು, ನಡಿಗೆಯಲ್ಲಿ ಲೋಪದೋಷ ಕಂಡು ಬರುವ ಸಾಧ್ಯತೆ ಇದೆ. ಆದ್ದರಿಂದ ಪೌಷ್ಟಿಕ ಆಹಾರದ ಜತೆಗೆ ಅಯೋಡಿನ್‌ಯಕ್ತ ಉಪ್ಪು ಸೇವನೆಗೆ ಆದ್ಯತೆ ನೀಡಬೇಕು ಎಂದರು. ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಜಿ.ಶಿವಕುಮಾರ್ ಮಾತನಾಡಿ, ಅಯೋಡಿನ್ ಕೊರೆತೆಯಿಂದಾಗಿ ವಯಸ್ಕರಲ್ಲಿ ನಿಶಕ್ತಿ, ಗಳಗಂಡ ರೋಗ, ಗರ್ಭಿಣಿಯರಲ್ಲಿ ಗರ್ಭಪಾತದಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರ ಬಗ್ಗೆ ಮಕ್ಕಳು ಜಾಗ್ರತೆಯನ್ನು ಹೊಂದಿ, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಕ್ರೀಡಾ ಚಟುವಟಿಕೆ ಹಮ್ಮಿಕೊಂಡು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.