ಮಂಡ್ಯ: ಹಸಿವು ಮುಕ್ತ ಜಗತ್ತು ನಿರ್ಮಿಸುವ ಸಂಕಲ್ಪ ಎಲ್ಲ ದೇಶಗಳ ಧ್ಯೇಯವಾಗಿದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.
ನಗರದ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಶೋರೂಂ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಹಸಿವು ದಿನ ಮತ್ತು ನಿರ್ಗತಿಕರಿಗೆ ನಿರಂತರ ಆಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಸಿವು ಎನ್ನುವುದು ಜಾಗತಿಕ ಸಮಸ್ಯೆಯಾಗಿದೆ. ಎಲ್ಲ ದೇಶಗಳು 2030ರ ವೇಳೆಗೆ ಹಸಿವು ಮುಕ್ತ ಜಗತ್ತು ನಿರ್ಮಿಸುವ ಸಂಕಲ್ಪ ಮಾಡಿವೆ ಎಂದು ತಿಳಿಸಿದರು.
ಹಸಿದವನಿಗೆ ಗೊತ್ತು ಅನ್ನದ ಮೌಲ್ಯ. ಸಾಕಷ್ಟು ಜನ ಮನೆ, ಸಭೆ, ಸಮಾರಂಭ, ಮದುವೆ ಕಾರ್ಯಗಳಲ್ಲಿ ಸರಿಯಾಗಿ ಊಟ ಮಾಡುವುದಿಲ್ಲ. ಜಗತ್ತಿನಲ್ಲಿ ಸುಮಾರು 8 ಕೋಟಿ 26 ಲಕ್ಷ ಜನರಿಗೆ ಒಂದೊತ್ತು ಊಟ ಸಿಗುತ್ತಿಲ್ಲ. ವಿಶ್ವದಲ್ಲಿ 820 ಕೋಟಿ ಜನಸಂಖ್ಯೆ ಇದೆ. ಆಹಾರ ಉತ್ಪಾದನೆಯಾಗುತ್ತಿದ್ದರೂ ಹಸಿವು ಮುಕ್ತ ದೇಶ, ರಾಜ್ಯ ನಿರ್ಮಾಣವಾಗಲೇ ಇಲ್ಲ ಎಂದರು.
ಶೋರೂಂನ ಮಂಡ್ಯ ಶಾಖೆ ವ್ಯವಸ್ಥಾಪಕ ದಿಲೀಪ್‌ಕುಮಾರ್ ಹೆಗ್ಡೆ ಮಾತನಾಡಿ, ಮಲಬಾರ್ ಚಾರಿಟೇಬಲ್ ಟ್ರಸ್ಟ್ ಆರಂಭವಾದಗಿನಿಂದ ದೇಶದಲ್ಲಿ ಕೋಟ್ಯಂತರ ರೂ ಆರ್ಥಿಕ ನೆರವು ನೀಡಲಾಗಿದೆ. ಹಸಿವು ಮುಕ್ತ ಜಗತ್ತು, ವಿದ್ಯಾರ್ಥಿವೇತನ, ಅಜ್ಜಿಮನೆ, ಮೈಕ್ರೋ ಲರ್ನಿಂಗ್ ಸೆಂಟರ್, ವೈದ್ಯಕೀಯ, ವಸತಿ, ಮದುವೆಗೆ ನೆರವು, ಸಂಚಾರಿ ವೈದ್ಯಕೀಯ ಸೌಲಭ್ಯ ಸ್ಥಾಪಿಸಲಾಗಿದೆ. ಈ ಹಣಕಾಸು ವರ್ಷದಲ್ಲಿ ದೇಶದಲ್ಲಿ ಬಳಕೆ ಮಾಡಲು ಸಿಎಸ್‌ಆರ್ ಯೋಜನೆಗೆ 150 ಕೋಟಿ ರೂ. ಮೀಸಲಿಡಲಾಗಿದೆ ಎಂದರು.
ನಗರಸಭಾ ಅಧ್ಯಕ್ಷ ನಾಗೇಶ್, ಸದಸ್ಯೆ ಮಂಜುಳಾ, ಮುಖಂಡರಾದ ಸುರೇಶ್, ಅಭಿಷೇಕ್, ಗುರುಸಿದ್ದು, ಅಮರ್‌ಗೌಡ, ಸೋಮಶೇಖರ್, ಜಗದೀಶ್ ಮತ್ತಿತರರಿದ್ದರು.