ಜಿಲ್ಲೆ

ವಿಶ್ವಮಾನವ ಸಂದೇಶ ಅಳವಡಿಸಿಕೊಳ್ಳಿ: ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಕರೆ

ಕೆ.ಎನ್.ರಾಘವೇಂದ್ರ

ಮಂಡ್ಯ: ರಾಷ್ಟ್ರಕವಿ ಕುವೆಂಪು ಪ್ರತಿಪಾದಿಸಿದ ವಿಶ್ವಮಾನವ ಸಂದೇಶವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮೇಲುಕೀಳು ಎಂಬ ಮನೋಭಾವನೆಯಿಂದ ಹೊರಬರಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹೇಳಿದರು.

ನಗರದ ರೈತ ಸಭಾಂಗಣದ ಮುಂಭಾಗವಿರುವ ಕುವೆಂಪು ಪುತ್ಥಳಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಹಯೋಗದಲ್ಲಿ ಡಿ.ದೇವರಾಜ ಅರಸು ಭವನದಲ್ಲಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಹಾಗೂ ಮಹಾಯೋಗಿ ವೇಮನ ಜಯಂತಿ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರಕವಿ ಕುವೆಂಪು ಅವರ ತತ್ವ, ಆದರ್ಶ ಮತ್ತು ಚಿಂತನೆಯನ್ನು ಯುವ ಪೀಳಿಗೆ ಬೆಳೆಸಿಕೊಳ್ಳಬೇಕು. ಡಾ.ಬಿ.ಆರ್.ಅಂಬೇಡ್ಕರ್ ಸಹ ನಾವೆಲ್ಲರೂ ಒಂದೇ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಅದೇ ರೀತಿ ತೆಲುಗಿನ ಪ್ರಸಿದ್ಧ ಕವಿ ವೇಮನ ಅವರು ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಜಿಲ್ಲಾಡಳಿತ ಮಹಾನ್ ನಾಯಕರ ಜಯಂತಿಯನ್ನು ಸಂತೋಷದಿಂದ ಆಚರಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕನ್ನಡ ಉಪನ್ಯಾಸಕ ಕೆ.ಪಿ.ಮತ್ಯುಂಜಯ ಮಾಂತನಾಡಿ, ಕೇರಳ ಮತ್ತು ತಮಿಳುನಾಡಿನಲ್ಲಿ ದ್ವಿಭಾಷಾ ನೀತಿ ಜಾರಿಯಲ್ಲಿದೆ. ಅಲ್ಲಿ ಎಲ್ಲ ಭಾಷಿಕರೂ ನಾಡ ಭಾಷೆಯನ್ನೇ ಮಾತೃ ಭಾಷೆಯನ್ನಾಗಿಸಿಕೊಂಡಿದ್ದಾರೆ. ಆದರೆ, ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡಿರು ವುದು ಕನ್ನಡದ ದುರಂತ. ಕುವೆಂಪು ಅವರು ತ್ರಿಭಾಷಾ ನೀತಿಯನ್ನು ತ್ರಿಶೂಲವಿದ್ದಂತೆ ಎಂದು ವಿಶ್ಲೇಷಿಸಿದ್ದರು. ಅಖಂಡ ಕರ್ನಾಟಕದ ಸ್ಥಾಪನೆಗೆ ಆಳುವ ಸರ್ಕಾರಗಳನ್ನೇ ವಿರೋಧ ಕಟ್ಟಿಕೊಂಡು ತಮ್ಮ ನಿಲುವನ್ನು ಪ್ರತಿಪಾದಿಸಿದ ಕುವೆಂಪು ಅವರ ದಿಟ್ಟತನ ಮತ್ತು ದೂರದೃಷ್ಟಿ ಇಂದಿನ ಸಾಂಸ್ಕೃತಿಕ ನಾಡು ಕಟ್ಟಲು ಸಹಕಾರಿಯಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಪ್ರವಾಹ ಹೀಗೆ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ಅಪ್ಪಟ ಕನ್ನಡ ನೆಲ ಮಂಡ್ಯದಲ್ಲೂ ಕೂಡ ಕನ್ನಡದ ಶಾಲೆಗಳನ್ನು ದೀಪ ಹಿಡಿದು ಹುಡುಕಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇಂದು ಪಿಯು ಮಟ್ಟದಲ್ಲೂ ಕನ್ನಡ ವರ್ಣಮಾಲೆಯನ್ನು ಗುರುತಿಸದ ಮಕ್ಕಳಿದ್ದಾರೆ ಎಂದರೆ ಎಲ್ಲರಿಗೂ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಇದಕ್ಕೆ ಪಾಲಕರೇ ಕಾರಣ ಎಂಬುದನ್ನು ಯಾರೂ ಅಲ್ಲಗಳೆಯಲಾಗದು. ನನ್ನ ಮಗುವಿಗೆ ಆಂಗ್ಲ ಭಾಷೆ ಚೆನ್ನಾಗಿ ಬರುತ್ತದೆ. ಆದರೆ ಕನ್ನಡ ಸರಿಯಾಗಿ ಬರಲ್ಲ ಎಂದು ದೊಡ್ಡಸ್ತಿಕೆ ಎಂಬಂತೆ ಹೇಳಿಕೊಳ್ಳುವ ವಾತಾವರಣ ಕಂಡುಬರುತ್ತಿದೆ. ಇದರ ಪರಿಣಾಮ ಇಡೀ ಸಮಾಜ ನಾಶದತ್ತ ಸಾಗುತ್ತದೆ ಎಂಬುದನ್ನು ಕವಿ ಕುವೆಂಪು ಅವರು ಹಿಂದೆಯೇ ಎಚ್ಚರಿಸಿದ್ದರು. ಒಂದು ಸಮಾಜವನ್ನು ನಾಶಪಡಿಸಬೇಕಾದರೆ ಅವರ ಮಾತೃಭಾಷೆಯನ್ನು ನಿರ್ನಾಮ ಮಾಡಿದರೆ ಸಾಕು. ಆ ಇಡೀ ಸಮಾಜವೇ ನಶಿಸಿ ಹೋಗುತ್ತದೆ ಎಂಬುದನ್ನು ತಮ್ಮ ವಿಚಾರಧಾರೆಯಲ್ಲಿ ಸೂಕ್ಷ್ಮವಾಗಿ ಎಚ್ಚರಿಸಿದ್ದಾರೆ ಎಂದು ಹೇಳಿದರು.

ಕುವೆಂಪು ಅವರ 121ನೇ ಜಯಂತಿಯನ್ನು ಆಚರಿಸುವ ಈ ಸಂದರ್ಭದಲ್ಲಿ ಆಳುವ ಸರ್ಕಾರಗಳು ಎಚ್ಚೆತ್ತುಕೊಂಡು ಮಾತೃ ಭಾಷೆಗೆ ಪ್ರಾಧಾನ್ಯತೆ ನೀಡಬೇಕು. ಹಿಂದಿ ಏರಿಕೆಗೆ ತಡೆಯೊಡ್ಡದಿದ್ದರೆ ಸದ್ಯದಲ್ಲೇ ನಮ್ಮ ಮಕ್ಕಳ ಭವಿಷ್ಯ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಎಚ್ಚರಿಸಿದ ಅವರು, ಅಚಲ ಯೋಗಿ ವೇಮನ ಭೋಗದ ಜೀವನದಿಂದ ವೈರಾಗ್ಯ ಜೀವನದ ಕಡೆಗೆ ಹೊರಳಿ ಜನತೆಗೆ ಮೌಲ್ಯಯುತ ಸಂದೇಶಗಳನ್ನು ನೀಡಿದ್ದಾರೆ. ಅಂತಹ ಮಹಾನ್ ಯೋಗಿ ಸಂತರು ನೀಡಿದ ಸಂದೇಶಗಳು ಮರೆಯಾಗಬಾರದು. ಅವುಗಳು ನಮಗೆ ಮಾರ್ಗದರ್ಶಕವಾಗಿರುವುದು ಸೂಕ್ತ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ಮೀರಾ ಶಿವಲಿಂಗಯ್ಯ, ಸ್ಕಂದ ಪುರಾಣದಲ್ಲಿಯೇ ಕರ್ನಾಟಕ ಎಂಬುದು ಉಕ್ತವಾಗಿದೆ ಎಂದು ಪ್ರತಿ ಪ್ರತಿಪಾದಿಸಿದ್ದ ಕುವೆಂಪು ಅವರು ಕನ್ನಡವನ್ನು ಎತ್ತಿ ಹಿಡಿದಷ್ಟು ಬೇರಾರೂ ಪ್ರಯತ್ನ ಮಾಡಿಲ್ಲ ಎಂದು ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಡಿ.ದೇವರಾಜ ಅರಸು ಹಿಂದುಳಿದ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ಎಸ್.ನಾರಾಯಣ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಕಸಾಪ ಪದಾಧಿಕಾರಿಗಳಾದ ಚಂದ್ರಲಿಂಗು, ಪಣ್ಣೆದೊಡ್ಡಿ ಹರ್ಷ, ಪ್ರತಿಭಾಂಜಲಿ ಡೇವಿಡ್ ಉಪಸ್ಥಿತರಿದ್ದರು. ಇದೇ ವೇಳೆ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯ ಪ್ರೊ.ಡೇವಿಡ್ ಮತ್ತು ತಂಡದಿಂದ ಕುವೆಂಪು ಅವರ ಗೀತೆಗಳನ್ನು ಹಾಡಲಾಯಿತು.